ಕುಸ್ತಿಪಟುಗಳಿಗೆ ನ್ಯಾಯ ದೊರೆಯುವ ತನಕ ಹೋರಾಟ; ನಾಳೆ ಅಂತಿಮ ನಿರ್ಧಾರ: ಮಹಾಪಂಚಾಯತ್‌ನಲ್ಲಿ ರಾಕೇಶ್ ಟಿಕಾಯತ್

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕುಸ್ತಿಪಟು ಫೆಡರೇಷನ್ ಅಧ್ಯಕ್ಷ ಬ್ರಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟಿಸುತ್ತಿರುವ ದೇಶದ ಖ್ಯಾತನಾಮ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಇಂದು ಮುಝಫ್ಫರ್‌ನಗರದಲ್ಲಿ ರೈತರ ಮಹಾಪಂಚಾಯತ್ ನಡೆಯಿತು.
ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್, ಕುಸ್ತಿಪಟುಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ನಾಳೆ ಹರ್ಯಾಣಾದಲ್ಲಿ ನಡೆಯುವ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯುವುದನ್ನು ತಡೆದಿರುವ ಟಿಕಾಯತ್, ತಾವು ಅವರ ಬೇಡಿಕೆ ಈಡೇರಿಸಲು ಸರ್ವ ಪ್ರಯತ್ನ ನಡೆಸುವುದಾಗಿ ತಿಳಿಸಿದರು, ಅವರಿಗೆ ನ್ಯಾಯ ದೊರೆಯುವ ತನಕ ಹೋರಾಡಲಾಗುವುದು ಎಂದರು. “ಅಗತ್ಯವಿದ್ದರೆ ನಾವು ರಾಷ್ಟ್ರಪತಿಗಳ ಬಳಿಗೆ ಹೋಗುವೆವು. ನಾವು ನಿಮ್ಮೊಂದಿಗಿದ್ದೇವೆ, ಚಿಂತಿಸಬೇಡಿ,” ಎಂದು ಅವರು ಕುಸ್ತಿಪಟುಗಳಿಗೆ ಭರವಸೆ ನೀಡಿದರು.
“ಪದಕಗಳನ್ನು ಗಂಗಾ ನದಿಗೆ ಎಸೆಯಬೇಡಿ, ಅವುಗಳನ್ನು ಹರಾಜು ಹಾಕಿ ಎಂದು ಅವರಿಗೆ ಹೇಳಿದೆ. ಇಡೀ ಜಗತ್ತು ಮುಂದೆ ಬಂದು ನಿಮ್ಮ ಹರಾಜು ನಿಲ್ಲಿಸುವುದು,” ಎಂದು ಅವರು ಹೇಳಿದರು.
ರೈತರು ಮತ್ತು ಖಾಪ್‌ಗಳು ಏಕೆ ಕುಸ್ತಿಪಟುಗಳಿಗೆ ಬೆಂಬಲ ನೀಡುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ ಕುಟುಂಬ ದೊಡ್ಡದಿದ್ದರೆ ಒಳ್ಳೆಯದು,” ಎಂದರು.
“ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ನಿಮಗೆ ಅರ್ಥವಾಗಬೇಕು. ಬಿಹಾರದಲ್ಲಿ ಲಾಲು ಯಾದವ್ ಅವರ ಕುಟುಂಬ ಮುರಿದರು. ಮುಲಾಯಂ ಸಿಂಗ್ ಯಾದವ್ ಕುಟುಂಬಕ್ಕೇನು ಮಾಡಿದ್ದಾರೆಂದು ನೋಡಿ. ರಾಜಸ್ಥಾನದಲ್ಲೂ ಅದೇ ನಡೆಯುತ್ತಿದೆ,” ಎಂದು ಅವರು ಹೇಳಿದರು.