ಕನ್ನಡ ನಾಡು-ನುಡಿ ಪರಂಪರೆಯ ಉಳಿವಿಗೆ ಅಗತ್ಯವಾದ ಎಲ್ಲ ಯೋಜನೆಗಳ ಅನುಷ್ಠಾನ: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು, ಜೂ.1: ಕನ್ನಡ ಭಾಷೆಯ ಅಸ್ಮಿತೆಯನ್ನು ಕಾಪಾಡಲು ಹಾಗೂ ಕನ್ನಡ ನಾಡು-ನುಡಿ-ಪರಂಪರೆಯ ಉಳಿವಿಗೆ ಅಗತ್ಯವಾದ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಗುರುವಾರ ನಗರದ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವ್ಯಾಪ್ತಿಗೆ ಬರುವ ಇಲಾಖೆಗಳ ಮುಖ್ಯಸ್ಥರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಇಲಾಖೆ ಹಾಗೂ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಅವರು ಮಾಹಿತಿ ಪಡೆದರು.
ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ವಿಧಾನಮಂಡಲದಲ್ಲಿ ಅನುಮೋದನೆಗೊಂಡ ವಿಧೇಯಕಕ್ಕೆ ಸಂಬಂಧಿಸಿದಂತೆ ಕಾಯ್ದೆ ಹಾಗೂ ನಿಯಮಗಳನ್ನು ರೂಪಿಸುವ ಕೆಲಸಕ್ಕೆ ವೇಗ ನೀಡಬೇಕು. ಕಾಲಮಿತಿಯಲ್ಲಿ ಕಾಯ್ದೆಗಳು ರೂಪುಗೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಆಯೋಜಿಸುತ್ತಿರುವ ವಿವಿಧ ಉತ್ಸವಗಳನ್ನು ಇನ್ನೂ ಹೆಚ್ಚು ಆಕರ್ಷಣೀಯವಾಗಿ ರಾಷ್ಟ್ರಮಟ್ಟದ ಗಮನ ಸೆಳೆಯುವಂತೆ ಆಯೋಜಿಸಲು ರೂಪುರೇಷೆ ಸಿದ್ಧಪಡಿಸಬೇಕೆಂದು ಅವರು ಹೇಳಿದರು.
ಪ್ರತೀ ಜಿಲ್ಲೆಯ ಜೀವಂತಿಕೆ ಉಳಿಸುವಂತಹ ಕಾರ್ಯಕ್ರಮವಾಗಬೇಕು. ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಇಲಾಖೆಯ ಸಹಯೋಗವನ್ನು ಪಡೆಯುವುದರ ಮೂಲಕ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಹೆಚ್ಚಿಸಬಹುದು. ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸುವುದರ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ ಮತ್ತು ಇಲಾಖೆಗಳು ಪರಿಶೀಲನೆ ನಡೆಸಬೇಕು ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಕನ್ನಡಿಗರಿಗೆ ಉದ್ಯೋಗವಕಾಶವನ್ನು ದೊರಕಿಸಬೇಕಾದ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಚ್ಚು ಶ್ರಮ ವಹಿಸಬೇಕು. ಅದಕ್ಕೆ ಸರಕಾರದಿಂದ ಬೇಕಾದ ಕಾನೂನಾತ್ಮಕ ನೆರವನ್ನು ಒದಗಿಸಲು ಶೀಘ್ರದಲ್ಲಿ ಸಂಬಂಧಪಟ್ಟವರ ಸಭೆ ಕರೆಯಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲು ಕ್ರಮವಹಿಸಲಾಗುವುದು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಬದ್ಧತೆಯಿಂದ ಕೆಲಸ ಮಾಡಬೇಕಿದೆ ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕ ವಿಶ್ವನಾಥ್ ಪಿ.ಹಿರೇಮಠ ಸೇರಿದಂತೆ ವಿವಿಧ ಪ್ರಾಧಿಕಾರಗಳ ಹಾಗೂ ಅಕಾಡೆಮಿಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.