ಬಿಬಿಎಂಪಿ ಆಸ್ತಿ ತೆರಿಗೆ ಶೇ. 5 ರಷ್ಟು ರಿಯಾಯಿತಿ: ಜೂ.30ರ ವರೆಗೆ ಅವಧಿ ವಿಸ್ತರಣೆ
ಬೆಂಗಳೂರು, ಜೂ. 1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ 2023-24ನೆ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ಶೇ.5ರಷ್ಟು ರಿಯಾಯಿತಿ ಅವಧಿಯನ್ನು ಜೂ.30ರ ವರೆಗೆ ವಿಸ್ತರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಮೇಯರ್ ಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಅಭಿವೃದ್ಧಿಗಾಗಿ ಹೇಗೆ ಹಣ ಸಂಗ್ರಹ ಮಾಡಬಹುದು, ಎಲ್ಲಿ ನ್ಯೂನ್ಯತೆಗಳಿವೆ, ತ್ಯಾಜ್ಯ ನಿರ್ವಹಣೆ, ರಸ್ತೆಗಳಲ್ಲಿ ಕಸ ಹಾಕುತ್ತಿರುವ ಬಗ್ಗೆ ಚರ್ಚೆ ಮಾಡಿದ್ದೇವೆ. ಇದನ್ನು ಹೇಗೆ ತಡೆಯಬಹುದು ಎಂದು ಸಲಹೆ ಪಡೆಯಲಾಗಿದೆ ಎಂದರು.
ಕಸದ ವಾಹನ ಟ್ರ್ಯಾಕ್ ಮಾಡುವುದು, ಕಸವನ್ನು ಎಲ್ಲೆದರಲ್ಲಿ ಎಸೆಯುವ ವಾಹನಗಳಿಗೆ ಯಾವ ರೀತಿ ದಂಡ ವಿಧಿಸಬೇಕು, ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇನೆ. ಸದಸ್ಯದಲ್ಲೇ ಇದನ್ನು ನಿಯಂತ್ರಿಸಲು ಯಾವ ಸೂಚನೆ ನೀಡಬೇಕು ಎಂದು ಅಧಿಕಾರಿಗಳ ಜತೆ ಸಭೆ ಮಾಡಿ ತೀರ್ಮಾನಿಸುತ್ತೇನೆ ಎಂದು ಅವರು ಹೇಳಿದರು.
ಸೋಮವಾರ ನಗರದ ಸರ್ವಪಕ್ಷ ಶಾಸಕರ ಸಭೆ ಕರೆದಿದ್ದು, ಅವರಿಂದಲೂ ಸಲಹೆಗಳನ್ನು ಪಡೆಯುತ್ತೇನೆ. ನಂತರ ನಮ್ಮ ಪಕ್ಷದ ಶಾಸಕರ ಜತೆ ಪ್ರತ್ಯೇಕ ಸಭೆ ಮಾಡುತ್ತೇನೆ ಎಂದ ಅವರು, ಪಾಲಿಕೆ ವಾರ್ಡ್ ಮರುವಿಂಗಡಣೆ ವಿಚಾರವಾಗಿ ಚರ್ಚೆ ನಡೆದಿದ್ದು, ಇದಕ್ಕಾಗಿ ನೇಮಕ ಮಾಡಿರುವ ಸಮಿತಿ ಜತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.