ಮಹಿಳಾ ಕ್ರೀಡಾ ಪಟುಗಳಿಗೆ ಸುರಕ್ಷಾ ಕ್ರಮ ಚರ್ಚೆಗೆ ನಕಾರ: ಟಿಎಂಸಿ ಸಂಸದರ ಸಭಾತ್ಯಾಗ

ಹೊಸದಿಲ್ಲಿ: ಪ್ರತಿಭಟನಾ ನಿರತ ಕುಸ್ತಿಪಟುಗಳ ಬೆಂಬಲಾರ್ಥವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ಪಾದಯಾತ್ರೆ ಕೈಗೊಂಡ ಬೆನ್ನಲ್ಲೇ ಗುರುವಾರ ದೆಹಲಿಯಲ್ಲಿ ನಡೆದ "ಶಿಕ್ಷಣ, ಮಹಿಳೆ, ಮಕ್ಕಳು, ಯುವಕರು ಮತ್ತು ಕ್ರೀಡೆ"ಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಟಿಎಂಸಿ ಸದಸ್ಯರು ಸಭಾತ್ಯಾಗ ನಡೆಸಿದರು.
ವಿವಿಧ ಕ್ರೀಡಾ ಒಕ್ಕೂಟಗಳಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಒದಗಿಸಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ವಿವೇಕ್ ಠಾಕೂರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಟಿಎಂಸಿ ಸದಸ್ಯರಾದ ಸುಷ್ಮಿತಾ ದೇವ್ ಮತ್ತು ಅಸಿತ್ ಕುಮಾರ್ ಮಲ್ ಈ ನಿರ್ಧಾರ ಕೈಗೊಂಡರು.
ವಿವಿಧ ಕ್ರೀಡಾ ಒಕ್ಕೂಟಗಳಲ್ಲಿ ಮಹಿಳಾ ಕ್ರೀಡಾಪಟುಗಳ ಸುರಕ್ಷೆಯನ್ನು ಸುಧಾರಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಬೇಕು ಎಂದು ಟಿಎಂಸಿ ಸದಸ್ಯರು ಪಟ್ಟು ಹಿಡಿದರು. ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ವಿರುದ್ಧದ ಲೈಂಗಿಕ ಕಿರುಕುಳವನ್ನು ವಿರೋಧಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ವಿಷಯ ಮಹತ್ವ ಪಡೆದಿತ್ತು. ವಿವಿಧ ಕ್ರೀಡಾ ಒಕ್ಕೂಟಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ರಚಿಸಲಾಗಿದೆಯೇ, ರಚಿಸಿದ್ದರೆ ಅವು ಸಕ್ರಿಯವಾಗಿದೆಯೇ ಎಂದು ದೇವ್ ಪ್ರಶ್ನಿಸಿದರು ಎಂದು ಉನ್ನತ ಮೂಲಗಳು ಹೇಳಿವೆ.
ಆದರೆ ಈ ವಿಷಯ ಕಾರ್ಯಸೂಚಿಯಲ್ಲಿಲ್ಲ ಎಂಬ ಕಾರಣಕ್ಕೆ ಈ ಬಗ್ಗೆ ಚರ್ಚಿಸಲು ಅಧ್ಯಕ್ಷರು ನಿರಾಕರಿಸಿದರು. ಜತೆಗೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ವಿಷಯ ಚರ್ಚಿಸುವುದು ನ್ಯಾಯಾಂಗದ ಮೇಲೆ ಹಸ್ತಕ್ಷೇಪ ಬೀರಿದಂತಾಗುತ್ತದೆ ಎಂದು ಹೇಳಿದರು.
ಗುರುವಾರದ ಸಭೆಯ ಕಾರ್ಯಸೂಚಿ, ಮುಂದಿನ ಒಲಿಂಪಿಕ್ಸ್ ಗೆ ಭಾರತದ ಸಿದ್ಧತೆ ಎಂಬ ವಿಷಯ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು. ಈ ಹಂತದಲ್ಲಿ ಟಿಎಂಸಿ ಸದಸ್ಯರು ಸಭಾತ್ಯಾಗ ನಡೆಸಿದರು. ಕಾಂಗ್ರೆಸ್ ಸದಸ್ಯ ಸಿಂಗ್ ಅವರು ದೇವ್ ಅವರನ್ನು ಬೆಂಬಲಿಸಿದರೂ, ಸಭಾತ್ಯಾಗ ಮಾಡಲಿಲ್ಲ ಎಂದು ಮೂಲಗಳು ತಿಳಿಸಿವೆ.