ಸೋಮೇಶ್ವರ ಬೀಚ್ ನಲ್ಲಿ ಅನೈತಿಕ ಪೊಲೀಸ್ ಗಿರಿ: ನಾಲ್ವರ ಬಂಧನ

ಉಳ್ಳಾಲ: ಸೋಮೇಶ್ವರ ಬೀಚ್ ಗೆ ಸಮುದ್ರ ವಿಹಾರಕ್ಕೆಂದು ಬಂದಿದ್ದ ಕೇರಳ ಮೂಲದ ಮೂವರು ಯುವತಿಯರು ಹಾಗೂ ಯುವಕರನ್ನು ತಂಡವೊಂದು ಹಿಂಬಾಲಿಸಿ ದಾಳಿ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಗೆ ಸಂಬಂಧಿಸಿದಂತೆ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಯತೀಶ್ ಬಸ್ತಿಪಡ್ಪು, ಸಚಿನ್ ತಲಪಾಡಿ, ಸುಹಾನ್ ತಲಪಾಡಿ ಹಾಗೂ ಇನ್ನೋರ್ವ ಅಪ್ರಾಪ್ತ ಎಂದು ಗುರುತಿಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರಕ್ಕೆ ಗುರುವಾರ ಸಂಜೆ ವೇಳೆ ಕೇರಳ ಮೂಲದ ಆರು ಮಂದಿ ವಿಹಾರಕ್ಕೆಂದು ಬಂದಿದ್ದರು.ಇವರಲ್ಲಿ ಮೂವರು ಯುವತಿಯರ ಜತೆ ಇದ್ದ ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಸಂಶಯದ ಮೇಲೆ ತಂಡವೊಂದು ಇವರನ್ನು ಹಿಂಬಾಲಿಸಿ ಹಲ್ಲೆ ನಡೆಸಿತ್ತು.ವಿದ್ಯಾರ್ಥಿಗಳು ಸಮುದ್ರ ತೀರದಲ್ಲಿ ವಿಹಾರ ನಡೆಸುತ್ತಿರುವ ಸಂದರ್ಭ ತಂಡ ಈ ಕೃತ್ಯ ಎಸಗಿದ್ದು ಇದರಿಂದ ಮೂವರು ಯುವಕರು ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಹಾಗೂ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.