ಗುಜರಾತ್ ಮೂಲದ ಕಂಪನಿ ವಿರುದ್ಧ ಶ್ರೀಲಂಕಾದಲ್ಲಿ ಕಳಪೆ ಗುಣಮಟ್ಟದ ಕಣ್ಣಿನ ಡ್ರಾಪ್ಸ್ ಪೂರೈಕೆ ಆರೋಪ: ತನಿಖೆ ಆರಂಭ
ಹೊಸದಿಲ್ಲಿ: ಗುಜರಾತ್ ಮೂಲದ ಕಂಪನಿಯೊಂದು ಶ್ರೀಲಂಕಾದಲ್ಲಿ ಕಳಪೆ ಗುಣಮಟ್ಟದ ಐ ಡ್ರಾಪ್ಸ್ ಪೂರೈಕೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ತನಿಖೆ ಆರಂಭವಾಗಿದೆ.
ಇಂಡಿಯಾನಾ ಆಪ್ತಾಲ್ಮಿಕ್ಸ್ ಎಂಬ ಕಂಪನಿ ಪೂರೈಸಿರುವ ಐ ಡ್ರಾಪ್ಸ್ ನಿಂದ 30ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಸೋಂಕು ಕಾಣಿಸಿಕೊಂಡಿದೆ ಎಂದು ಶ್ರೀಲಂಕಾ ಸರಕಾರ ಭಾರತ ಸರಕಾರಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದೆ.
ಭಾರತದ ಉನ್ನತ ಔಷಧೀಯ ರಫ್ತು ಕೌನ್ಸಿಲ್ ಈ ಆರೋಪಕ್ಕೆ ಸಂಬಂಧಿಸಿ ಕಂಪನಿಗೆ ನೋಟಿಸ್ ಕಳುಹಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಆಂತರಿಕ ತನಿಖೆಯ ಕುರಿತು ಕಂಪನಿಯಿಂದ ವಿವರಣೆಯನ್ನು ಕೇಳಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಏಜೆನ್ಸಿ ಫಾರ್ಮೆಕ್ಸಿಲ್ ಗುರುವಾರ ಇಂಡಿಯಾನಾ ಆಪ್ತಾಲ್ಮಿಕ್ಸ್‌ಗೆ ಶೋಕಾಸ್ ನೋಟಿಸ್ ಕಳುಹಿಸಿದೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕೂಡ ಕಂಪನಿಯು ಉತ್ಪಾದಿಸುವ ಮೀಥೈಲ್‌ಪ್ರೆಡ್ನಿಸೋಲೋನ್ ಕಣ್ಣಿನ ಹನಿಗಳ ಗುಣಮಟ್ಟದ ಕಳವಳದ ಬಗ್ಗೆ ತನಿಖೆಯನ್ನು ಆರಂಭಿಸಿದೆ.
ನಿಮ್ಮ ಕಂಪನಿಯಿಂದ ಕಲುಷಿತ ಐಡ್ರಾಪ್‌ಗಳ ಪೂರೈಕೆಯು ಭಾರತೀಯ ಫಾರ್ಮಾ ಉದ್ಯಮಕ್ಕೆ ಕೆಟ್ಟ ಹೆಸರು ತಂದಿದೆ ಹಾಗೂ ಭಾರತೀಯ ಫಾರ್ಮಾ ರಫ್ತಿನ ಮೇಲೆ ಅಂತರರಾಷ್ಟ್ರೀಯ ಏಜೆನ್ಸಿಗಳ ನಂಬಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಫಾರ್ಮೆಕ್ಸಿಲ್‌ನ ಮಹಾನಿರ್ದೇಶಕ ಉದಯ ಭಾಸ್ಕರ್ ಅವರು ಇಂಡಿಯಾನಾ ಆಪ್ತಾಲ್ಮಿಕ್ಸ್ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.