ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ವಿರುದ್ಧ ಶಿವಮೊಗ್ಗದಲ್ಲಿ ಎಫ್ ಐಆರ್
ಜೈಲು ಅಧಿಕಾರಿಗಳ ದೂರು; ಏನಿದು ಕೇಸ್?

ಶಿವಮೊಗ್ಗ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಆದಿತ್ಯ ರಾವ್ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಉಂಟು ಮಾಡಿದ ಆರೋಪದ ಹಿನ್ನೆಲೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಆದಿತ್ಯ ರಾವ್ ಮೇ 31ರಂದು ಮಧ್ಯಾಹ್ನ ಜೈಲಿನ ವಿಡಿಯೋ ಕಾನ್ಫರೆನ್ಸ್ ಕೊಠಡಿ ಬಳಿ ಬಂದಿದ್ದ. ತನ್ನ ವಿಚಾರಣೆ ಇದೆಯೇ ಎಂದು ಪ್ರಶ್ನಿಸಿದ್ದ. ಅಲ್ಲಿದ್ದ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿ ಇಲ್ಲ ಎಂದು ತಿಳಿಸಿದ್ದರು. ಸ್ವಲ್ಪ ದೂರ ಹೋಗಿದ್ದ ಆದಿತ್ಯ ಮತ್ತೆ ಹಿಂತಿರುಗಿ ಬಂದು ವಿ.ಸಿ.ಕೊಠಡಿಯಲ್ಲಿದ್ದ ಟಿವಿಯೊಂದಕ್ಕೆ ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದಾನೆ ಆರೋಪಿಸಲಾಗಿದೆ.
ಅಷ್ಟರಲ್ಲಿ ಕೊಠಡಿಯಲ್ಲಿದ್ದ ಸಿಬ್ಬಂದಿ ಆದಿತ್ಯನನ್ನು ಹಿಡಿದಿದ್ದರು. ಆದರೆ ಅವರಿಂದ ತಪ್ಪಿಸಿಕೊಂಡು ಮತ್ತೊಂದು ಟಿವಿಯನ್ನು ಒಡೆದು ಹಾಕಿದ್ದಾನೆ. ಕೂಡಲೆ ಸಿಬ್ಬಂದಿ ಆದಿತ್ಯನನ್ನು ಹಿಡಿದು ಜೈಲರ್ ವಶಕ್ಕೆ ಒಪ್ಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೈಲಿನಲಿದ್ದ ಎರಡು ಟಿವಿಗಳನ್ನು ಒಡೆದು ಹಾಕಿರುವ ಆದಿತ್ಯ ವಿರುದ್ಧ ಸಾರ್ವಜನಿಕ ಸ್ವತ್ತು ನಾಶಪಡಿಸಿದ ಆರೋಪದಲ್ಲಿ ದೂರು ನೀಡಲಾಗಿದೆ. ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಅವರು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.