ಚಿಕ್ಕಮಗಳೂರು: ಯುವಕರಿಂದ ಅಸಭ್ಯ ವರ್ತನೆ ಆರೋಪ; ನ್ಯಾಯಕ್ಕಾಗಿ ಅರ್ಧರಾತ್ರಿ ವರೆಗೂ ಠಾಣೆಯಲ್ಲಿ ಕೂತ ಮಹಿಳೆ

ಚಿಕ್ಕಮಗಳೂರು: ಮಹಿಳೆಯೊಬ್ಬರು ನ್ಯಾಯಕ್ಕಾಗಿ 4 ವರ್ಷದ ಮಗು ಜೊತೆ ರಾತ್ರಿ 1 ಗಂಟೆವರೆಗೂ ಠಾಣೆಯಲ್ಲೇ ಕೂತ ಘಟನೆ ಕಳಸದಲ್ಲಿ ನಡೆದಿದೆ.
ಸಂಸೆ ಗ್ರಾಮದ ಮಹಿಳೆಯೊಬ್ಬರು ಪಕ್ಕದ ಮನೆಯ ಯುವಕರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ನನ್ನ ಗಂಡನಿಗೆ ಜೀವ ಬೆದರಿಕೆ ಇದೆ ಅಂತ ಎರಡು ದಿನಗಳ ಹಿಂದೆ ಕುದುರೆಮುಖ ಠಾಣೆಯಲ್ಲಿ ದೂರು ಸಲ್ಲಿಸಿದ್ದರು ಎನ್ನಲಾಗಿದೆ.
ಅಸಭ್ಯ ವರ್ತನೆಯ ವೀಡಿಯೋ ನೀಡಿದರೂ ಕುದುರೆಮುಖ ಪೊಲೀಸರು ಯಾವುದೇ ದೂರು ದಾಖಲಿಸದ ಹಿನ್ನೆಲೆಯಲ್ಲಿ ಕಳಸ ಇನ್ಸ್‌ಪೆಕ್ಟರ್ ಕಚೇರಿಗೆ ತೆರಳಿದ ಮಹಿಳೆ ಅರ್ಧರಾತ್ರಿ ವರೆಗೆ ಠಾಣೆಯಲ್ಲೇ ಕುಳಿತಿದ್ದರು.
ಎಫ್.ಐ.ಆರ್. ದಾಖಲಾಗದೆ ಮನೆಗೆ ಹೋಗಲ್ಲ ಅಂತ ಪಟ್ಟು ಹಿಡಿದ ಮಹಿಳೆ, ಮಗುವಿಗೆ ಪೊಲೀಸ್ ಠಾಣೆಯಲ್ಲೇ ಊಟ ಮಾಡಿಸಿ ಮಲಗಿಸಿದ್ದಾಳೆ.
ಅಸಭ್ಯ ವರ್ತನೆ ಮಾಡಿದ ಆರೋಪಿಗಳಾದ ನವೀನ್, ಶ್ರೇಯಾಂಶ್ ವಿರುದ್ಧ ಮಹಿಳೆ ದೂರು ನೀಡಿದ್ದು, ಮಹಿಳೆಯ ಆಕ್ರೋಶದ ಹಿನ್ನೆಲೆಯಲ್ಲಿ ಯುವಕರ ವಿರುದ್ಧ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story