ಬ್ರಿಜ್ ಭೂಷಣ್ ಸಿಂಗ್ ಬೆಂಬಲಿಸಿ ಅಯೋಧ್ಯೆಯಲ್ಲಿ ನಡೆಯಬೇಕಿದ್ದ ರ‍್ಯಾಲಿ ಮುಂದೂಡಿಕೆ
ಹೊಸದಿಲ್ಲಿ: ತನ್ನ ವಿರುದ್ಧದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ತನ್ನನ್ನು ಬೆಂಬಲಿಸಿ ಅಯೋಧ್ಯೆಯಲ್ಲಿ ನಡೆಯಬೇಕಿದ್ದ ರ್ಯಾಲಿಯನ್ನು ಕೆಲವು ದಿನಗಳ ಕಾಲ ಮುಂದೂಡಲಾಗಿದೆ ಎಂದು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಒಳಗಾಗಿರುವ ಕುಸ್ತಿ ಸಂಸ್ಥೆಯ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
ಸೋಮವಾರ "ಸಾಧುಗಳ ಆಶೀರ್ವಾದದೊಂದಿಗೆ" ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದಾಗಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಇತ್ತೀಚೆಗೆ ಘೋಷಿಸಿದ್ದರು.
ಕುಸ್ತಿಪಟುಗಳಿಂದ ಸಿಂಗ್ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳಲ್ಲಿ ಪಟ್ಟಿ ಮಾಡಲಾದ ಆರೋಪಗಳ ವಿವರಗಳು ಹೊರಹೊಮ್ಮುತ್ತಿದ್ದಂತೆ ರ್ಯಾಲಿಯನ್ನು ರದ್ದುಗೊಳಿಸುವ ಕುರಿತು ಸಿಂಗ್ ಹೇಳಿಕೆ ನೀಡಿದ್ದಾರೆ. ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ದೇಶದ ಅಗ್ರಮಾನ್ಯ ಕುಸ್ತಿಪಟುಗಳು ಸಿಂಗ್ ನನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ರಾಜಕೀಯ ವಿರೋಧಿಗಳು ಹಾಗೂ ಪಕ್ಷಗಳು ತನ್ನ ಮೇಲೆ "ಸುಳ್ಳು ಆರೋಪ" ಮಾಡುತ್ತಿದ್ದಾರೆ ಎಂದು ಸಿಂಗ್ ಮತ್ತೊಮ್ಮೆ ಹೇಳಿದ್ದಾರೆ.
“ನಿಮ್ಮ ಬೆಂಬಲದಿಂದ ಕಳೆದ 28 ವರ್ಷಗಳಿಂದ ಲೋಕಸಭೆ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಅಧಿಕಾರ ಹಾಗೂ ವಿರೋಧ ಪಕ್ಷದಲ್ಲಿರುವಾಗ ಎಲ್ಲಾ ಜಾತಿ, ಸಮುದಾಯ ಹಾಗೂ ಧರ್ಮದ ಜನರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದೇನೆ. ನನ್ನ ರಾಜಕೀಯ ವಿರೋಧಿಗಳು ಹಾಗೂ ಅವರ ಪಕ್ಷಗಳು ನನ್ನ ವಿರುದ್ಧ ಸುಳ್ಳು ಆರೋಪ ಮಾಡಲು ಇದುವೇ ಕಾರಣ”ಎಂದು ಸಂಸದ ಸಿಂಗ್ ಹೇಳಿದರು.