ಮಂಡ್ಯ: ಸಹೋದರಿ ಸಾವಿನ ಬೆನ್ನಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ವೈದ್ಯನ ಮೃತದೇಹ ಪತ್ತೆ

ಮಂಡ್ಯ, ಜೂ.2: ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದ ಕೆರೆಯ ಬಳಿ ಖಾಸಗಿ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ವೇಣುಗೋಪಾಲ್ (57)ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೆಲವು ದಿನಗಳ ಹಿಂದೆ ವೇಣುಗೋಪಾಲ್ ಅವರ ಸಹೋದರಿ ಸಾವನಪ್ಪಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಡಾ. ವೇಣುಗೋಪಾಲ್ ಮಂಡ್ಯದ ಉಮ್ಮಡಹಳ್ಳಿ ಗೇಟ್ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಾದ ಸಾಂಜೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಅವರು, ಹಲವು ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಮಧ್ಯಾಹ್ನ ಮೂರ್ನಾಲ್ಕು ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಹೊರಟು ಮದ್ದೂರು ಸಾರಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಬಳಿಕ ಗುರುವಾರ ತಡರಾತ್ರಿ 10 ಗಂಟೆ ವೇಳೆಗೆ ತನ್ನ ಸಹೋದರಿಯ ಗ್ರಾಮವಾದ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದ ಕೆರೆಯ ಬಳಿ ಆಗಮಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗ್ರಾಮಸ್ಥರು ಶುಕ್ರವಾರ ಬೆಳಗ್ಗೆ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ ಪ್ರಕರಣ ಬೆಳಕಿಗೆ ಬಂದಿದ್ದು ಮದ್ದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಶೀಲನೆ ನಡೆಸಿದ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.