ಮೈಸವರುತ್ತಿದ್ದರು, ಅನುಚಿತ ಪ್ರಶ್ನೆ ಕೇಳುತ್ತಿದ್ದರು: ಬ್ರಿಜ್‌ಭೂಷಣ್ ವಿರುದ್ಧದ ಎಫ್‌ಐಆರ್ ನಲ್ಲಿ ಉಲ್ಲೇಖ

ಹೊಸದಿಲ್ಲಿ: ಬಿಜೆಪಿ ಸಂಸದ ಹಾಗೂ ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್, ಮಹಿಳಾ ಅಥ್ಲೀಟುಗಳ ಮೈಸವರಿದ್ದರು, ಅನುಚಿತ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದರು ಹಾಗೂ ಅವರು ವೃತ್ತಿಯಲ್ಲಿ ಉನ್ನತಿ ಸಾಧಿಸಬೇಕಿದ್ದರೆ ಲೈಂಗಿಕವಾಗಿ ಸಹಕರಿಸುವಂತೆ ಕೋರಿದ್ದರು. ಅಪ್ರಾಪ್ತೆಯೊಬ್ಬರ ಎದೆಯನ್ನು ಸವರಿದ್ದರು ಹಾಗೂ ಆಕೆಯ ಬೆನ್ನ ಹಿಂದೆ ಬಿದ್ದಿದ್ದರು ಎಂದು ಸಿಂಗ್ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳಲ್ಲಿ ಹೇಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಏಳು ಮಹಿಳಾ ಕುಸ್ತಿಪಟುಗಳು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ದಾಖಲಿಸಿದ ದೂರಿನ ಆಧಾರದಲ್ಲಿ ಒಂದು ಎಫ್‌ಐಆರ್‌ನಲ್ಲಿ ಆರು ದೂರುಗಳನ್ನು ಒಗ್ಗೂಡಿಸಲಾಗಿದ್ದರೆ ಇನ್ನೊಂದರಲ್ಲಿ ಅಪ್ರಾಪ್ತೆಯ ತಂದೆಯ ಧೂರಿನ ಆಧಾರದಲ್ಲಿ ದಾಖಲಿಸಲಾಗಿತ್ತು.
ಬ್ರಜ್ ಭೂಷಣ್ ಕಿರುಕುಳ ತಪ್ಪಿಸಲು ಎಲ್ಲಾ ಮಹಿಳಾ ಅಥ್ಲೀಟುಗಳು ತಮ್ಮ ಕೊಠಡಿಗಳಿಂದ ತೆರಳುವಾಗ ಗುಂಪಾಗಿ ಹೋಗುತ್ತಿದ್ದರು. ಆದರೆ ಅವರಲ್ಲಿ ಕೆಲವರಲ್ಲಿ ಆತ ಅನುಚಿತ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ದೂರುದಾರರು ಹೇಳಿದ್ದಾರೆ.
“ಆರೋಪಿ (ಸಿಂಗ್) ನನ್ನನ್ನು ಕರೆದು ನನ್ನ ಟಿ-ಶರ್ಟ್ ಮೇಲೆಳೆದು ನನ್ನ ಹೊಟ್ಟೆಗೆ ಕೈಹಾಕಿ ನನ್ನ ಉಸಿರಾಟ ಪರೀಕ್ಷೆಗೆಂದು ಹೊಕ್ಕುಳ ಮೇಲೆ ಕೈಹಾಕಿದ್ದರು,” ಎಂದು ದೂರುದಾರೆಯೊಬ್ಬರು ಹೇಳಿದ್ದಾರಲ್ಲದೆ ಸಿಂಗ್ ತನಗೆ ತನ್ನ ಡಯಟಿಶಿಯನ್ ಅಥವಾ ಕೋಚ್‌ನಿಂದ ಅನುಮೋದಿತವಲ್ಲದ “ತಿಳಿಯದ ವಸ್ತು” ತಿನ್ನಲು ನೀಡಿ ಅದು ಆರೋಗ್ಯ ಮತ್ತು ನಿರ್ವಹಣೆಗೆ ಒಳ್ಳೆಯದು ಎಂದು ಹೇಳಿದ್ದರು,” ಎಂದು ಆಕೆ ಆರೋಪಿಸಿದ್ದಾರೆ. ಇನ್ನೊಬ್ಬ ದೂರುದಾರೆ ವಿದೇಶದಲ್ಲಿ ಸ್ಪರ್ಧೆಯ ವೇಳೆ ಗಾಯಾಳುವಾದಾಗ ತನ್ನ ಲೈಂಗಿಕ ಬಯಕೆ ತೀರಿಸಿದರೆ ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದ್ದರು ಎಂದು ಆರೋಪಿಸಿದ್ದಾರೆ.
ಎಲ್ಲಾ ದೂರುದಾರರು ಒಂದೇ ರೀತಿಯ ಆರೋಪಗಳನ್ನು ಮಾಡಿದ್ದರೆ ಇನ್ನೊಬ್ಬಾಕೆ, ಸಿಂಗ್ ತನ್ನ ಲೈಂಗಿಕ ಬಯಕೆ ಪೂರೈಸಿದರೆ ಸಪ್ಲಿಮೆಂಟ್‌ಗಳ ಖರೀದಿಸಲು ಸಹಾಯ ಮಾಡುವುದಾಗಿ ತಿಳಿಸಿದ್ದರು ಎಂದು ಆರೋಪಿಸಿದ್ದಾರೆ.