ಬಾಂಗ್ಲಾ ಅಕ್ರಮ ವಲಸಿಗರೆಂಬ ಶಂಕೆಯಿಂದ ಬೆಂಗಳೂರಿನಲ್ಲಿ 301 ದಿನ ಜೈಲುವಾಸ ಅನುಭವಿಸಿದ ಪಶ್ಚಿಮ ಬಂಗಾಳ ದಂಪತಿ

ಕೊಲ್ಕತ್ತಾ: ಬೆಂಗಳೂರಿಗೆ ಕಾರ್ಮಿಕರಾಗಿ ದುಡಿಯಲು ತೆರಳಿದ್ದ ಪಶ್ಚಿಮ ಬಂಗಾಳದ ಬುರ್ದ್ವಾನ್ ಇಲ್ಲಿನ ದಂಪತಿಯನ್ನು ಬಾಂಗ್ಲಾದೇಶಿ ಅಕ್ರಮ ವಲಸಿಗರೆಂದು ತಪ್ಪಾಗಿ ಗುರುತಿಸಿದ ಕಾರಣ ಬೆಂಗಳೂರಿನಲ್ಲಿ 301 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದಾರೆ. ನ್ಯಾಯಾಲಯವೊಂದು ಅವರಿಗೆ ಜಾಮೀನು ನೀಡಿದ ನಂತರ ಅವರು ಗುರುವಾರ ತಮ್ಮ ಹುಟ್ಟೂರಿಗೆ ರೈಲಿನಲ್ಲಿ ತೆರಳಿದ್ದಾರೆ ಎಂದು timesofindia ವರದಿ ಮಾಡಿದೆ.
ಪಾಲಶ್ ಮತ್ತು ಶುಕ್ಲಾ ಅಧಿಕಾರಿ ಎಂಬ ಹೆಸರಿನ ದಂಪತಿ ಜುಲೈ 2022 ರಲ್ಲಿ ತಮ್ಮ ಎರಡು ವರ್ಷದ ಮಗುವಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಅವರು ಅಕ್ರಮ ಬಾಂಗ್ಲಾದೇಶಿ ವಲಸಿಗರೆಂಬ ಸಂಶಯದಿಂದ ಅವರನ್ನು ಪೊಲೀಸರು ಬಂಧಿಸಿದ್ದರು ಹಾಗೂ ವಿದೇಶೀಯರ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ತಾವು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನ ಜಮಾಲಪುರ ಠಾಣೆ ವ್ಯಾಪ್ತಿಯ ತೆಲೆಪುಕುರ್ ಗ್ರಾಮದವರೆಂದು ಅವರು ಪೊಲೀಸರಿಗೆ ಪರಿಪರಿಯಾಗಿ ವಿವರಿಸಿದರೂ ಪ್ರಯೋಜನವಾಗಿರಲಿಲ್ಲ.
ನಂತರದ ಬೆಳವಣಿಗೆಯಲ್ಲಿ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ಪರಿಶೀಲಿಸಿದ್ದರು ಹಾಗೂ ದಂಪತಿಯ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದ್ದರು. ಅವರ ಕುಟುಂಬದವರು ಬೆಂಗಳೂರಿಗೆ ಬಂದು ಕಾನೂನು ಹೋರಾಟ ಆರಂಭಿಸಿದ್ದರು.
ದಂಪತಿಗೆ ಎಪ್ರಿಲ್ 28ರಂದು ಜಾಮೀನು ದೊರಕಿದ್ದರೂ ಮೇ 24ರಂದು ಬಿಡುಗಡೆಗೊಂಡಿದ್ದರು. ಸ್ಥಳೀಯ ಗ್ಯಾರಂಟರ್ ತಮ್ಮ ಭೂ ದಾಖಲೆಗಳನ್ನು ಸಲ್ಲಿಸಬೇಕಿದ್ದರಿಂದ ಅವರು ಬಿಡುಗಡೆಗೊಳ್ಳುವುದು ವಿಳಂಬವಾಗಿತ್ತು.