ಪಿಎಸ್ಸೈ ನೇಮಕಾತಿ ಹಗರಣ: ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಅಮೃತ್ ಪೌಲ್

ಬೆಂಗಳೂರು, ಜೂ. 2: ಪಿಎಸ್ಸೈ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ವಿಚಾರಣಾ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದು, ಇದು ಸಿಆರ್‍ಪಿಸಿ ಕಲಂ 173ಕ್ಕೆ ವಿರುದ್ಧವಾದ ನಡವಳಿಕೆ ಎಂದು ಅಮೃತ್ ಪೌಲ್ ಪರ ವಕೀಲರು ಹೈಕೋರ್ಟ್‍ಗೆ ಹೇಳಿದ್ದಾರೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಪ್ರಕರಣದಲ್ಲಿ 35ನೆ ಆರೋಪಿಯಾಗಿರುವ ಅಮೃತ್ ಪೌಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎಂ.ಎಸ್.ಶ್ಯಾಮಸುಂದರ್, ‘ಅರ್ಜಿದಾರರಾದ ಅಮೃತ್ ಪೌಲ್ ಅವರು ಹಲವು ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ವಿಚಾರಣಾ ಕೋರ್ಟ್ ಅವರ ವಿರುದ್ಧದ ಯಾವುದೇ ಅಪರಾಧಗಳನ್ನು ಸಂಜ್ಞೇಯ ಎಂದು ಪರಿಗಣಿಸದೇ ಇರುವ ಕಾರಣ ಅವರ ಬಂಧನ ಕಾನೂನು ಬಾಹಿರವಾಗಿದೆ ಎಂದು ಪೀಠಕ್ಕೆ ತಿಳಿಸಿದರು.
‘ಕಂತು ಕಂತುಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಾಸಿಕ್ಯೂಷನ್ ನಡವಳಿಕೆಯನ್ನು ದೆಹಲಿ ಹೈಕೋರ್ಟ್ ಇತ್ತೀಚೆಗಷ್ಟೇ ಖಂಡಿಸಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದ ಅವರು, ‘ಕಲಂ 67(2)ರ ಅಡಿಯಲ್ಲಿ ಆರೋಪಿಗಳ ಹಕ್ಕುಗಳಿಗೆ ವಿರುದ್ಧವಾಗಿ ನಡೆಯುವ ಇಂತಹ ಕ್ರಮಗಳನ್ನು ನಿಲ್ಲಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಆರಂಭಿಕವಾಗಿ ಪ್ರಕರಣದ ಅಪರಾಧಗಳನ್ನು ಐಪಿಸಿ ಅಡಿಯಲ್ಲಿ ದಾಖಲಿಸಿದ್ದು, ನಂತರ ಇದಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನೂ ಹೊಸೆಯಲಾಗುತ್ತಿದೆ. ಇದರಿಂದ ಪ್ರಾಸಿಕ್ಯೂಷನ್ ತನ್ನ ವಿಶೇಷ ಅಧಿಕಾರ ವ್ಯಾಪ್ತಿ ಮೀರುತ್ತಿದೆ ಎಂದರು. ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಜೂ.8ಕ್ಕೆ ಮುಂದೂಡಿತು.