ಸ್ಪೀಕರ್ ಸ್ಥಾನದ ಗೌರವ ಹೆಚ್ಚಿಸುವೆ: ಯು.ಟಿ.ಖಾದರ್
ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಸನ್ಮಾನ
ಮಂಗಳೂರು, ಜೂ.2: ವಿಧಾನಸಭೆಯ ಅಧ್ಯಕ್ಷ ಸ್ಥಾನಕ್ಕೆ ತನ್ನದೇ ಆದ ಗೌರವ, ಸ್ಥಾನಮಾನವಿದೆ. ಆದರೆ ತನಗೆ ಲಭಿಸಿರುವುದು ಕೇವಲ ಗೌರವ ಮಾತ್ರವಲ್ಲ, ಜವಾಬ್ದಾರಿಯೂ ಆಗಿದೆ. ಈ ಜವಾಬ್ದಾರಿಯನ್ನು ತಾನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸುವೆ ಎಂದು ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲಾ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ’ಯ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದ ಜನತೆಯು ಕೋಮುವಾದಕ್ಕೆ ವಿರುದ್ಧವಾದ ಮತ್ತು ಸಂವಿಧಾನಕ್ಕೆ ಬದ್ಧವಾದ ಸರಕಾರ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಅದಕ್ಕೆ ಪೂರಕವಾಗಿ ಸ್ಪೀಕರ್ ಸ್ಥಾನದಲ್ಲಿದ್ದುಕೊಂಡು ನಿಷ್ಪಕ್ಷಪಾತವಾಗಿ, ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡು ಕೆಲಸ ಮಾಡುತ್ತೇನೆ. ಈ ಸ್ಥಾನವು ಅಲ್ಲಾಹನು ತನಗೆ ನೀಡಿದ ಅನುಗ್ರಹವಾಗಿದೆ. ಇದು ಕ್ಷೇತ್ರದ ಮತದಾರರು, ಕಾರ್ಯಕರ್ತರಿಗೆ ಸಂದ ಗೌರವವಾಗಿದೆ. ಹಾಗಾಗಿ ರಾಜ್ಯಕ್ಕೆ, ಸಮಾಜಕ್ಕೆ, ಸಮುದಾಯಕ್ಕೆ ಮಾದರಿಯಾಗುವಂತೆ ಯಾವುದೇ ಕಪ್ಪುಚುಕ್ಕೆಯೂ ಬಾರದಂತೆ ಅತ್ಯಂತ ಸಮರ್ಥವಾಗಿ ಕೆಲಸ ಮಾಡುವೆ ಎಂದು ಯು.ಟಿ.ಖಾದರ್ ಹೇಳಿದರು.
ಸಮಸ್ಯೆಗಳು, ಸವಾಲುಗಳು ಸಾಮಾನ್ಯವಾಗಿದೆ. ಅದನ್ನು ಎದುರಿಸುವ ಧೈರ್ಯಬೇಕು. ದ್ವೇಷ ಮುಕ್ತ ಸಮಾಜ ಕಟ್ಟುವುದು ನಮ್ಮೆಲ್ಲರ ಗುರಿಯಾಗಬೇಕು. ಹಾಗಾಗಿ ಯಾವ ಕಾರಣಕ್ಕೂ ಪ್ರಚೋದನೆ, ಉದ್ವೇಗಕ್ಕೆ ಒಳಗಾಗದೆ ಅತ್ಯಂತ ತಾಳ್ಮೆಯಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಈ ಹಿಂದೆ ಆದ ಅನ್ಯಾಯಗಳಿಗೆ ಸಂವಿಧಾನದ್ಧ ವಾಗಿ ನ್ಯಾಯ ಕೊಡಿಸಲಾಗುವುದು. ದ್ವೇಷದಿಂದ ಯಾರನ್ನೂ ಗೆಲ್ಲಲು ಸಾಧ್ಯವಿಲ್ಲ. ಯುವ ಸಮೂಹವು ಭವಿಷ್ಯದಲ್ಲಿ ಇಂತಹ ಉನ್ನತ ಸ್ಥಾನಕ್ಕೇರಲು ಸದಾ ಪ್ರಯತ್ನಿಸಬೇಕು. ಅದಕ್ಕಾಗಿ ನಮ್ಮನ್ನು ನಾವೇ ಆತ್ಮಾವಲೋಕನ ಮಾಡಬೇಕಿದೆ ಎಂದು ಯು.ಟಿ.ಖಾದರ್ ನುಡಿದರು.
ಸ್ಪೀಕರ್ ಹುದ್ದೆ ಸಾಮಾನ್ಯ ಹುದ್ದೆಯಲ್ಲ. ಅದಕ್ಕೆ ಅದರದ್ದೇ ಆದ ಗೌರವ, ಘನತೆ ಇದೆ. ಹಾಗಾಗಿ ಖಾದರ್ ಅವರಿಗೆ ಸಮುದಾಯವು ಇನ್ನಷ್ಟು ಗೌರವ ನೀಡಬೇಕು. ಕಳೆದ ಸರಕಾರದ ಆಡಳಿತದಲ್ಲಿ ಬೆಳ್ಳಾರೆಯ ಮಸೂದ್, ಕಾಟಿಪಳ್ಳದ ಜಲೀಲ್, ಮಂಗಳಪೇಟೆಯ ಫಾಝಿಲ್ ಕೊಲೆಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಸಂವಿಧಾನಬದ್ಧವಾಗಿ ಈ ಮೂವರ ಕುಟುಂಬಕ್ಕೆ ಸರಕಾರದಿಂದ ಏನೇನು ಪರಿಹಾರ ಸಿಗಬೇಕೋ ಅದನ್ನು ನೀಡಲು ಪ್ರಯತ್ನಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಒತ್ತಾಯಿಸಿದರು.
ಸಾರ್ವಜನಿಕವಾಗಿ ಸದಾ ಬೆರೆಯುವ ಖಾದರ್‌ರಲ್ಲಿ ನಾಯಕತ್ವದ ಗುಣವಿದೆ. ಕಿರಿಯ ವಯಸ್ಸಿನಲ್ಲಿ ದೊಡ್ಡ ಹುದ್ದೆಗೆ ಏರಿದ ಕೀರ್ತಿ ಖಾದರ್‌ಗೆ ಸಲ್ಲುತ್ತದೆ. ರಾಜ್ಯದ ಇತಿಹಾಸದಲ್ಲೇ ಮೊತ್ತ ಮೊದಲ ಮುಸ್ಲಿಂ ಸ್ಪೀಕರ್ ಎಂಬ ಹೆಗ್ಗಳಿಕೆಯು ಖಾದರ್ ಅವರದ್ದಾಗಿದೆ. ಅವಿರೋಧವಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ಮುಂದೆಯೂ ಜನಪರವಾಗಿ ಕೆಲಸ ಮಾಡಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೆನೆಪೋಯ ವಿವಿಯ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ ಹೇಳಿದರು.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಪ್ರಮುಖರಾದ ಎಸ್.ಎಂ. ರಶೀದ್ ಹಾಜಿ, ಹಾಜಿ ಯು.ಕೆ.ಕಣಚೂರು ಮೋನು, ಜಿ.ಎ. ಬಾವಾ, ನಾಸರ್ ಲಕ್ಕಿಸ್ಟಾರ್, ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್ ಕಂದಕ್, ಝೀನತ್ ಶಂಶುದ್ದೀನ್, ಶಂಶುದ್ದೀನ್ ಕುದ್ರೋಳಿ, ಮುನೀಬ್ ಬೆಂಗರೆ, ಅಬ್ದುಲ್ ರವೂಫ್ ಬಜಾಲ್, ಅಶ್ರಫ್ ಬಜಾಲ್, ಶಂಶಾದ್ ಅಬೂಬಕರ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಕಮಿಟಿಯ ಪದಾಧಿಕಾರಿಗಳಾದ ಹಾಜಿ ಸಿ. ಮಹ್ಮೂದ್, ಹಾಜಿ ಬಾಷಾ ಸಾಹೇಬ್ ಕುಂದಾಪುರ, ಹಾಜಿ ಮೂಸಾ ಮೊಯ್ದಿನ್, ಕೆ. ಅಶ್ರಫ್, ಕೆಪಿ. ಅಹ್ಮದ್ ಪುತ್ತೂರು, ಹಾಜಿ ಇಮ್ತಿಯಾಝ್ ಕಾರ್ಕಳ, ಹಾಜಿ ಎಸ್.ಎ. ಬಾಷಾ ತಂಙಳ್, ಹಾಜಿ ಅಹ್ಮದ್ ಬಾವಾ ಪಡೀಲ್, ಅಬೂಬಕರ್ ಕುದ್ರೋಳಿ, ಡಿಎಂ. ಅಸ್ಲಂ, ಬಿ.ಎಸ್.ಇಮ್ತಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ಯಾರಿ ಮುಸ್ಲಿಂ ಸಮುದಾಯದ ಪೈಲಟ್ ಕ್ಯಾಪ್ಟನ್ ಹಾನಿಯಾ ಹನೀಫ್ ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು.
ಅನೀಸ್ ಮೊಯ್ದಿನ್ ಕಿರಾಅತ್ ಪಠಿಸಿದರು. ಹಾಜಿ ಇಬ್ರಾಹೀಂ ಕೋಡಿಜಾಲ್ ಸ್ವಾಗತಿಸಿದರು. ಮುಹಮ್ಮದ್ ಹನೀಫ್ ಸನ್ಮಾನ ಪತ್ರ ವಾಚಿಸಿದರು. ಹಾಜಿ ಬಿಎಂ ಮುಮ್ತಾಝ್ ಅಲಿ ವಂದಿಸಿದರು. ಅಲ್ ಅಝ್‌ಹರಿಯಾ ವಿದ್ಯಾರ್ಥಿಗಳು ದಫ್ ಮತ್ತು ಇಕ್ರಾ ಅರಬಿಕ್ ಸ್ಕೂಲ್ ವಿದ್ಯಾರ್ಥಿಗಳು ಗೀತೆ ಪ್ರಸ್ತುತಪಡಿಸಿದರು.