ಪೂಜೆಯ ಹಕ್ಕಿಗಾಗಿ ಕೋರಿದಾಕ್ಷಣ ಮಸೀದಿ ದೇವಸ್ಥಾನವಾಗುವುದಿಲ್ಲ: ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ಜ್ಞಾನವಾಪಿ ಮಸೀದಿಯೊಳಗೆ ಪೂಜೆ ಸಲ್ಲಿಸುವ ಹಕ್ಕು ಬೇಕೆಂದು ಹಿಂದೂ ಅರ್ಜಿದಾರರು ಕೋರಿದಾಕ್ಷಣ ಮಸೀದಿಯು ದೇವಸ್ಥಾನವಾಗಿ ಪರಿವರ್ತನೆಯಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಮಸೀದಿಯ ಒಳಗೆ ಪೂಜೆ ಸಲ್ಲಿಸಲು ಅನುಮತಿ ಕೊರಿ ಹಿಂದೂ ಅರ್ಜಿದಾರರು ಸಲ್ಲಿಸಿರುವ ಅರ್ಜಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸುತ್ತಾ ನ್ಯಾಯಾಲಯ ಈ ಮಾತುಗಳನ್ನು ಹೇಳಿದೆ.
ಮಸೀದಿಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ಅಂಜುಮಾನ್ ಇಂತಾಝಾಮಿಯ ಸಮಿತಿಯು ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಅರ್ಜಿಯನ್ನು ಬುಧವಾರ ವಜಾಗೊಳಿಸಲಾಯಿತು ಮತ್ತು ತೀರ್ಪನ್ನು ಗುರುವಾರ ಬಹಿರಂಗಪಡಿಸಲಾಯಿತು.
ಮಸೀದಿ ಆವರಣದ ಒಳಗೆ ಪೂಜೆ ಸಲ್ಲಿಸಲು ಹಕ್ಕುಗಳನ್ನು ಕೋರಿ ಐವರು ಹಿಂದೂ ಮಹಿಳೆಯರು ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ಮಸೀದಿಯ ಒಳಗೆ ಹಿಂದೂ ದೇವತೆ ಶೃಂಗಾರ ಗೌರಿಯ ಚಿತ್ರವಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದರು.
ಮಸೀದಿ ಸಮಿತಿಯು ಈ ಅರ್ಜಿಯನ್ನು ವಿರೋಧಿಸಿತ್ತು. ಅದು 1991ರ ಪೂಜಾ ಸ್ಥಳಗಳ (ವಿಶೇಷ ವಿಧಿಗಳ) ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಅದು ವಾದಿಸಿತ್ತು. ಸ್ಥಳವೊಂದರ ಧಾರ್ಮಿಕ ಸ್ವರೂಪವು 1947 ಆಗಸ್ಟ್ 15ರ ವೇಳೆಗೆ ಹೇಗಿತ್ತೋ ಅದನ್ನು ನಂತರ ಬದಲಾಯಿಸಲು ಸಾಧ್ಯವಿಲ್ಲ ಎಂದು ಈ ಕಾಯ್ದೆ ಹೇಳುತ್ತದೆ.
ಹಿಂದೂಗಳು ಮಸೀದಿ ಆವರಣದ ಒಳಗೆ 1947 ಆಗಸ್ಟ್ 15ರಿಂದ 1993ರವರೆಗೂ ತಮ್ಮ ದೇವರುಗಳಿಗೆ ಪೂಜೆ ಸಲ್ಲಿಸಿದ್ದರು. ಪೂಜಾ ಸ್ಥಳಗಳ ಕಾಯ್ದೆ 1991ರಲ್ಲಷ್ಟೇ ಜಾರಿಗೆ ಬಂದಿರುವುದರಿಂದ ಈ ಕಾನೂನಿನ ಅಡಿಯಲ್ಲಿ ಅವರ ಪೂಜಿಸುವ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ತನ್ನ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಜೆ.ಜೆ. ಮುನೀರ್ ಹೇಳಿದ್ದಾರೆ.