ವಿಟ್ಲ: ಸರಕಾರಿ ಶಾಲೆಯಿಂದ ಗೌರವ ಶಿಕ್ಷಕಿಯರನ್ನು ಹುದ್ದೆಯಿಂದ ಕೈಬಿಟ್ಟ ಆರೋಪ: ಶಾಲೆಯಲ್ಲಿ ಜಮಾಯಿಸಿದ ಮಕ್ಕಳ ಪೋಷಕರು

ವಿಟ್ಲ: ವೀರಕಂಬ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರನ್ನು ಹುದ್ದೆಯಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಮಕ್ಕಳ ಹೆತ್ತವರು ಶಾಲೆಯಲ್ಲಿ ಜಮಾಯಿಸಿದ ಘಟನೆ ನಡೆದಿದೆ.
ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದತ್ತು ಸಂಸ್ಥೆ ವೇತನ ನೀಡಿ ಈ ಹಿಂದೆ ಇಬ್ಬರು ಶಿಕ್ಷಕರ ನ್ನು ನೇಮಿಸಿದ್ದು ಈ ವರ್ಷ ಅವರ ಬದಲಿಗೆ ಬೇರೆ ನಾಲ್ಕು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಆಕ್ರೋಶ ಗೊಂಡ ಮಕ್ಕಳ ಹೆತ್ತವರು ಶಾಲೆ ಮುಂಭಾಗ ಜಮಾಯಿಸಿ, ತಕ್ಷಣವೇ ಇಬ್ಬರನ್ನು ನೇಮಕ ಮಾಡಬೇಕು ಎಂದು ಪಟ್ಟು ಹಿಡಿದರು. ಎಸ್ಡಿಎಂಸಿ ಸಭೆಯಲ್ಲಿ ಇಬ್ಬರು ಶಿಕ್ಷಕರನ್ನು ಮುಂದುವರಿಸಲಾಗುವುದು ಎಂದು ನಿರ್ಣಯ ಕೈಗೊಂಡರೂ ಅದು ಪಾಲನೆ ಆಗಿಲ್ಲ ಎಂದು ದೂರಿದರು.
ಶಾಲೆಯ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ದತ್ತು ಪಡೆದಿರುವ ಸುರತ್ಕಲ್ ಮಾತ ಡೆವಲಪರ್ಸ್ ಪ್ರೈವೆಟ್ ಲಿಮಿಟಿಡ್ ನ ಸಂತೋಷ್ ಕುಮಾರ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿ, ಮುಚ್ಚುವ ಹಂತದಲ್ಲಿದ್ದ ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಾಗಿದೆ. ವರ್ಷಕ್ಕೆ ಲಕ್ಷಾಂತರ ರೂ. ಹಣ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಶಾಲಾ ಕಟ್ಟಡ, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಇಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮುಂದುವರಿಸುವ ಉದ್ದೇಶದಿಂದ ಅವರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಆದರೆ ಅವರು ಆಯ್ಕೆ ಸಂದರ್ಭದಲ್ಲಿ ಬಹಿರಂಗ ಪ್ರದರ್ಶನ ನೀಡಲು ಒಪ್ಪಿರಲಿಲ್ಲ, ಆದುದ್ದರಿಂದ ಹೊಸ ಶಿಕ್ಷಕರನ್ನು ನೇಮಿಸಲಾಗಿದೆ ಎಂದರು.
ಈ ಬಗ್ಗೆ ಶಿಕ್ಷಣಾಧಿಕಾರಿಗಳ ಜತೆ ಚರ್ಚಿಸಲಾಗಿದೆ. ಸರಕಾರದ ನಿಯಮದ ಪ್ರಕಾರ ಪ್ರಕ್ರಿಯೆ ನಡೆಸುವಂತೆ ಅವರು ತಿಳಿಸಿದ್ದು, ಅದರಂತೆ ಸಭೆಯಲ್ಲಿ ಇಟ್ಟು ತೀರ್ಮಾನ ಮಾಡಲಾಗುತ್ತದೆ ಎಂದು ಶಾಲಾ ಮುಖ್ಯೋಪಾ ಧ್ಯಾಯ ನಾರಾಯಣ ಪೂಜಾರಿ ತಿಳಿಸಿದ್ದಾರೆ.