ಜೂ.7ರಿಂದ ಶಿಕ್ಷಕರ ವರ್ಗಾವಣೆ ಪ್ರಾರಂಭ

ಬೆಂಗಳೂರು, ಜೂ. 2: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆಯೂ ಜೂ.7ರಿಂದ ಆರಂಭವಾಗಲಿದ್ದು, ಇದಕ್ಕೂ ಮೊದಲು ಜೂ.6ರಂದು ಹೆಚ್ಚುವರಿ ಶಿಕ್ಷಕರ ಸ್ಥಳ ಮರುನಿಯುಕ್ತಿ ಕೌನ್ಸಿಲಿಂಗ್ ಪ್ರಕ್ರಿಯೆ ಜರುಗಲಿದೆ.
ಈ ಸಂಬಂಧ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಹೆಚ್ಚುವರಿ ಶಿಕ್ಷಕರ ನಿಯುಕ್ತಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ, ಜಿಲ್ಲಾ, ವಿಭಾಗೀಯ ಹಂತದ ವರ್ಗಾವಣೆ ಸಏರಿದಂತೆ ಎಲ್ಲ ಪ್ರಕ್ರಿಯೆಗಳೂ ಜುಲೈ 31ರೊಳಗೆ ಪೂರ್ಣಗೊಳ್ಳಲಿದೆ.
ಈಗಾಗಲೇ ಶಿಕ್ಷಕರ ಸ್ಥಳ ನಿಯುಕ್ತಿ ಗೊಂದಲ, ವಿಧಾನಸಭಾ ಚುನಾವಣೆ ಪ್ರಕ್ರಿಯೆಯಿಂದಾಗಿ ರಾಜ್ಯದೆಲ್ಲೆಡೆ 10,500 ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆ ನೆನಗುತ್ತಿಗೆ ಬಿದ್ದಿದೆ. ಇನ್ನೂ, ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ-2020 ಜಾರಿಗೊಳಿಸಿ, ರಾಜ್ಯ ಸರಕಾರ ಡಿಸೆಂಬರ್‍ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಆಗ ಸರಿ ಸುಮಾರು 80ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು.
ವರ್ಗಾವಣೆ ಅವಧಿ: ಜೂ.6ರಿಂದ ಜೂ.22ರ ವರೆಗೆ ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ ಕೌನ್ಸಲಿಂಗ್, ಜೂ. 8ರಿಂದ ಜೂ.26ರ ವರೆಗೆ ತಾಂತ್ರಿಕ ಸಹಾಯಕ ಶಿಕ್ಷಕರು, ಅಧಿಕಾರಿಗಳ, ಜೂ.7ರಿಂದ ಜುಲೈ 31ರ ವರೆಗೆ ಸಾಮಾನ್ಯ ಕೋರಿಕೆ ವರ್ಗಾವಣೆ, ಜು.10ರಿಂದ ಜು.17ರ ವರೆಗೆ ಜಿಲ್ಲಾ ಹಂತದ ವರ್ಗಾವಣೆ ಕೌನ್ಸಲಿಂಗ್, ಜು.25ರಿಂದ ಜು.31ರ ವರೆಗೆ ಅಂತರ್ ವಿಭಾಗೀಯ ವರ್ಗಾವಣೆ ಪ್ರಕ್ರಿಯೆ ಜರುಗಲಿದೆ.