ಕೇಂದ್ರದ ‘ದಿಲ್ಲಿ ಸುಗ್ರೀವಾಜ್ಞೆ’ಗೆ ಸ್ಟಾಲಿನ್ ವಿರೋಧ
ಚೆನ್ನೈ: ದಿಲ್ಲಿಯಲ್ಲಿ ಅಧಿಕಾರಶಾಹಿಗಳ ಮೇಲೆ ನಿಯಂತ್ರಣ ಹೇರುವುದಕ್ಕೆ ಅನುಮತಿ ನೀಡುವ ಸುಗ್ರೀವಾಜ್ಞೆಯನ್ನು ಡಿಎಂಕೆ ವಿರೋಧಿಸುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ತಿಳಿಸಿದ್ದಾರೆ.
‘‘ ಆಮ್ ಆದ್ಮಿ ಪಕ್ಷಕ್ಕೆ ಕೇಂದ್ರ ಸರಕಾರವು ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ ಹಾಗೂ ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರಕಾರವು ಸ್ವತಂತ್ರವಾಗಿ ಕಾರ್ಯನಿರ್ವಹಿಸದಂತೆ ತಡೆಯುತ್ತಿದೆ’’ಎಂದವರು ಹೇಳಿದ್ದಾರೆ.
ಸ್ಟಾಲಿನ್ ಅವರು ಗುರುವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ ಮಾನ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ದಿಲ್ಲಿಯ ಉನ್ನತ ಅಧಿಕಾರಿವರ್ಗದ ಮೇಲೆ ಕೇಂದ್ರ ಸರಕಾರವು ನಿಯಂತ್ರಣ ಸಾಧಿಸುವುದಕ್ಕೆ ಅನುಮತಿ ನೀಡುವ ಸುಗ್ರೀವಾಜ್ಞೆಯನ್ನು ಸಂಸತ್‌ನಲ್ಲಿ ಸಾಮೂಹಿಕವಾಗಿ ಸೋಲಿಸಬೇಕಾಗಿದೆ. ಈ ಸುಗ್ರೀವಾಜ್ಞೆಯು ಪ್ರಜಾಸತ್ತಾತ್ಮಕವಾದುದಲ್ಲ ಹಾಗೂ ಫೆಡರಲ್ ಸಂರಚನೆಗೆ ವಿರುದ್ಧವಾದುದಾಗಿದೆ ಮತ್ತು ಅಸಂವಿಧಾನಿಕ’’ ಎಂದವರು ಹೇಳಿದರು.
ಕೇಜ್ರಿವಾಲ್ ಅವರನ್ನು ಭೇಟಿಯಾದ ಬಳಿಕ ಟ್ವೀಟ್ ಮಾಡಿದ ಸ್ಟಾಲಿನ್ , ಒಕ್ಕೂಟ ವ್ಯವಸ್ಥೆಯನ್ನು ಕಡೆಗಣಿಸುವ ಹಾಗೂ ರಾಜ್ಯಗಳ ಸಾರ್ವಭೌಮತ್ವವನ್ನು ನಶಿಸುವಂತೆ ಮಾಡುವ ನಿರ್ಧಾರಗಳನ್ನು ತನ್ನ ಪಕ್ಷ ವಿರೋಧಿಸುತ್ತಲೇ ಬಂದಿದೆ ಎಂದರು.