200 ಭಾರತೀಯ ಬೆಸ್ತರ ಬಿಡುಗಡೆ: ಪಾಕಿಸ್ತಾನ

ಇಸ್ಲಮಾಬಾದ್: ಮಾನವೀಯ ಕ್ರಮವಾಗಿ ಭಾರತದ 200 ಮೀನುಗಾರರನ್ನು ಹಾಗೂ ಮೂವರು ನಾಗರಿಕರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಶುಕ್ರವಾರ ಘೋಷಿಸಿದ್ದಾರೆ.
ಪಾಕಿಸ್ತಾನದ ಜಲವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 198 ಭಾರತೀಯ ಮೀನುಗಾರರನ್ನು ಕಳೆದ ತಿಂಗಳು ಪಾಕ್ ಸರಕಾರ ಬಿಡುಗಡೆಗೊಳಿಸಿದ್ದು ಅವರನ್ನು ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಇವತ್ತು ಪಾಕಿಸ್ತಾನ ಮತ್ತೆ 200 ಭಾರತೀಯ ಮೀನುಗಾರರನ್ನು ಹಾಗೂ ಮೂವರು ನಾಗರಿಕರನ್ನು ಬಿಡುಗಡೆಗೊಳಿಸುತ್ತಿದೆ. ಮಾನವೀಯ ವಿಷಯಗಳನ್ನು ರಾಜಕೀಯಗೊಳಿಸಬಾರದು ಎಂಬ ಪಾಕಿಸ್ತಾನದ ಕಾರ್ಯನೀತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜಕೀಯಕ್ಕಿಂತ ಕರುಣೆಗೆ ಆದ್ಯತೆ ನೀಡಬೇಕಾಗಿದೆ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರೆ. ಬಿಡುಗಡೆಗೊಂಡ ಕೈದಿಗಳನ್ನು ಕರಾಚಿಯಿಂದ ಲಾಹೋರ್‌ಗೆ ಕರೆದೊಯ್ಯುವ ಪ್ರಯಾಣ ವೆಚ್ಚವನ್ನು ಇಧಿ ಫೌಂಡೇಷನ್ ಭರಿಸಲಿದೆ. ಬಿಡುಗಡೆಗೊಂಡ ಕೈದಿಗಳನ್ನು ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ.