ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ: 24 ಗಂಟೆಗಳೊಳಗೆ ಪೊಲೀಸರ ಬಲೆಗೆ ಬಿದ್ದ ಆರೋಪಿಗಳು
ದಾವಣಗೆರೆ: ದುಷ್ಕರ್ಮಿಗಳು ಹಣಕ್ಕಾಗಿ ವ್ಯಕ್ತಿಯೊಬ್ಬರನ್ನ ಅಪಹರಣ ಮಾಡಿದ್ದ 24 ಗಂಟೆಯಲ್ಲಿ ಪ್ರಕರಣ ಭೇದಿಸಿರುವ ಪೊಲೀಸರು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ 5 ಜನ ಆರೋಪಿಗಳನ್ನು ಬಂಧಿಸಿದ್ದು, ಅಪರಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಸಾಗರ್ (23 ವರ್ಷ), ಯುವರಾಜ (30 ವರ್ಷ), ಸುಂದ ನಾಯ್ಕ (21 ವರ್ಷ), ಚೇತನ್ ಕುಮಾರ (27 ವರ್ಷ) ಇವರು ಸೇರಿದಂತೆ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಚನ್ನಗಿರಿ ತಾ. ಅಂತಪುರ ಗ್ರಾಮದ ಬಳಿ ಬಂಧಿಸಿದ್ದು, ಒಂದು ಕಾರು ಹಾಗೂ ಬೈಕನ್ನು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಅಂಬಿಕಾ ನಗರದ ವಾಸಿ ಲೊಕೇಶ್ (60 ವರ್ಷ) ಇವರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದು, 20 ಲಕ್ಷ ರೂ., ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕೇಶ್ ಪುತ್ರ ನಾಗರಾಜ್ ಗುರುವಾರ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಸಹಾಯಕ ಪೊಲೀಸ್ ಅಧೀಕ್ಷಕರಾದ ಕನ್ನಿಕಾ ಸಿಕ್ರಿವಾಲ್, ನಗರ ಪೊಲೀಸ್ ಉಪಾಧಿಕ್ಷಕ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ನಿರೀಕ್ಷಕ ಯು.ಜೆ.ಶಶಿಧರ್, ಸಂಚಾರ ವೃತ್ತ ನಿರೀಕ್ಷಕ ಅನಿಲ್, ಬಸವನಗರ ಪೊಲೀಸ್ ನಿರೀಕ್ಷಕ ಅರ್.ಆರ್.ಪಾಟೀಲ್, ಚನ್ನಗಿರಿ ಪೊಲೀಸ್ ನಿರೀಕ್ಷಕ ಮಧು, ಸಂತೇಬೆನ್ನೂರು ಪೊಲೀಸ್ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕೆಟಿಜೆ ನಗರ ಪಿಎಸ್ ಐ ಎಸ್.ಆರ್.ಕಾಟೇ ಮತ್ತು ಸಿಬ್ಬಂದಿಗಳ ತಂಡ ಪತ್ತೆ ಕಾರ್ಯ ಕೈಗೊಂಡು ಯಶಸ್ವಿಯಾಗಿದೆ.