ಒಡಿಶಾ ರೈಲು ದುರಂತ: ಮೂರು ರೈಲುಗಳು ಒಂದೇ ಕಡೆ ಹಳಿ ತಪ್ಪಿದ್ದು ಹೇಗೆ…?

ಬಲಸೋರ್: ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ತ್ರಿವಳಿ ರೈಲು ದುರಂತ 233 ಮಂದಿಯ ಜೀವ ಬಲಿ ಪಡೆದಿದೆ. ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಮೂರು ರೈಲುಗಳು ಒಂದೇ ಕಡೆ ಹಳಿ ತಪ್ಪಿರುವ ಬಗ್ಗೆ ಒಡಿಶಾ ಸರ್ಕಾರ ತಡರಾತ್ರಿ ಸ್ಪಷ್ಟನೆ ನೀಡಿದೆ.
ಮೊದಲು ಬೆಂಗಳೂರಿನಿಂದ ಹೌರಾಗೆ ತೆರಳುತ್ತಿದ್ದ ಸೂಪರ್‍ಫಾಸ್ಟ್ ರೈಲು ಹಳಿ ತಪ್ಪಿ ಪಕ್ಕದ ಹಳಿಗೆ ಬೋಗಿಗಳು ಬಿದ್ದಿವೆ. ಚೆನ್ನೈಗೆ ಬರುತ್ತಿದ್ದ ಶಾಲಿಮರ್-ಚೆನ್ನೈ ಸೆಂಟ್ರಲ್ ಕೋರಮಂಡಲ ಎಕ್ಸ್‍ಪ್ರೆಸ್ ರೈಲು, ಹಳಿ ತಪ್ಪಿದ್ದ ಬೆಂಗಳೂರು- ಹೌರಾ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆಡಿದೆ. ಬಳಿಕ ಕೋರಮಂಡಲ ಎಕ್ಸ್‍ಪ್ರೆಸ್ ರೈಲಿನ ಬೋಗಿಗಳಿಗೆ ಸರಕು ಸಾಗಾಣಿಕೆ ರೈಲು ಡಿಕ್ಕಿ ಹೊಡೆದು ತ್ರಿವಳಿ ದುರಂತ ಸಂಭವಿಸಿದೆ.
ಕೊಲ್ಕತ್ತಾದಿಂದ 250 ಕಿಲೋಮೀಟರ್ ದಕ್ಷಿಣಕ್ಕೆ, ಭುವನೇಶ್ವರದಿಂದ 170 ಕಿಲೋಮೀಟರ್ ಉತ್ತರಕ್ಕೆ ಇರುವ ಬಲಸೋರ್ ಜಿಲ್ಲೆಯ ಬಹಂಗಾ ಬಜಾರ್ ರೈಲು ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ. ಬೆಂಗಳೂರು- ಹೌರಾ ರೈಲು ಸಂಜೆ 6.55ಕ್ಕೆ ಹಳಿ ತಪ್ಪಿದ್ದರೆ ಕೋರಮಂಡಲ ರೈಲು 7 ಗಂಟೆಗೆ ಹಳಿ ತಪ್ಪಿದೆ. ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಬೋಗಿಗಳಿಗೂ ಹಳಿ ತಪ್ಪಿದ ರೈಲಿನ ಬೋಗಿಗಳು ಡಿಕ್ಕಿಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಕೋರಮಂಡಲ ಎಕ್ಸ್‍ಪ್ರೆಸ್ ರೈಲಿನ ಪ್ರಯಾಣಿಕ ಅನುಭವ್ ದಾಸ್ ಭಯಾನಕ ಅನುಭವವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. "ಕೋರಮಂಡಲ ಎಕ್ಸ್‍ಪ್ರೆಸ್ ರೈಲಿನ ಪ್ರಯಾಣಿಕನಾಗಿ ಅಪಾಯದಿಂದ ಪಾರಾಗಿರುವುದಕ್ಕೆ ಕೃತಜ್ಞತೆ ಹೇಳಲೇಬೇಕು. ಇತ್ತೀಚಿನ ದಿನಗಳಲ್ಲಿ ಇದು ಅತಿ ದೊಡ್ಡ ರೈಲು ದುರಂತ. ನಿಖರವಾಗಿ ಅಲ್ಲದಿದ್ದರೂ ನಾನು 200-250 ಮಂದಿಯ ಶವ ಕಂಡಿದ್ದೇನೆ. ಇಡೀ ಕುಟುಂಬಗಳೇ ನಾಶವಾಗಿವೆ. ಕಾಲು ಮುರಿದ, ರಕ್ತಸಿಕ್ತ ದೇಹಗಳು ಹಳಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ದೃಶ್ಯವನ್ನು ಮರೆಯಲು ಸಾಧ್ಯವಿಲ್ಲ. ಆ ಕುಟುಂಬಗಳಿಗೆ ದೇವರೇ ನೆರವಾಗಬೇಕು.. ನನ್ನ ಸಂತಾಪಗಳು" ಎಂದು ಟ್ವೀಟ್ ಮಾಡಿದ್ದಾರೆ.
As a passenger on the Coromandel Express from Howrah to Chennai, I am extremely thankful to have escaped unscathed. It probably is the biggest train accident related incident. Thread of how the incident unfolded 1/n
— Anubhav Das (@anubhav2das) June 2, 2023