ಪಿಎಫ್ ಖಾತೆಯಲ್ಲಿ 11 ಲಕ್ಷ ಕೋಟಿ ರೂ: ಸುಕುಮಾರ್
ಭವಿಷ್ಯನಿಧಿ ಪಿಂಚಣಿದಾರರ ಉಡುಪಿ ವಲಯ ಸಮಾವೇಶ ಉದ್ಘಾಟನೆ
ಉಡುಪಿ, ಜೂ.3: ಸದ್ಯ ಭವಿಷ್ಯ ನಿಧಿ ಖಾತೆಯಲ್ಲಿ ಐದು ಕೋಟಿ ಚಂದದಾರರ ಒಟ್ಟು 11 ಲಕ್ಷ ಕೋಟಿ ರೂ. ಇದೆ. ಇದು ರಾಜ್ಯದ ಬಜೆಟ್ ಮೊತ್ತಕ್ಕಿಂತ ನಾಲ್ಕು ಪಟ್ಟು ಜಾಸ್ತಿ. ಈ ಹಣಕ್ಕೆ ಪ್ರತಿವರ್ಷ 9 ಸಾವಿರ ರೂ. ಕೋಟಿ ಆದಾಯ ಬರುತ್ತದೆ. ಆದುದರಿಂದ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿಯನ್ನು 9,000 ರೂ.ಗೆ ಹೆಚ್ಚಿಸಬೇಕು. ಅಲ್ಲದೆ ವರ್ಷ ಪ್ರತಿ ಬೆಲೆ ಏರಿಕೆಯ ಆಧಾರದಲ್ಲಿ ಹೆಚ್ಚಾಗುವ ತುಟ್ಟಿಭತ್ತೆಯನ್ನು ಭವಿಷ್ಯ ನಿಧಿ ಪಿಂಚಣಿದಾರರಿಗೂ ಕೊಡಬೇಕು ಎಂದು ಎಂದು ಪಿಂಚಣಿದಾರ ಸಂಘದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಒತ್ತಾಯಿಸಿದ್ದಾರೆ.
ಪಿಂಚಣಿದಾರರ ಸಂಘದ ಉಡುಪಿ ವಲಯದ ವತಿಯಿಂದ ಉಡುಪಿಯ ಬನ್ನಂಜೆ ಶ್ರೀ ನಾರಾಯಣಗುರು ಸಭಾಂಗಣದಲ್ಲಿ ಆಯೋಜಿಸಲಾದ ಭವಿಷ್ಯ ನಿಧಿ ಪಿಂಚಣಿದಾರರ ಉಡುಪಿ ವಲಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಬೀಡಿ ಸೇರಿದಂತೆ ಬಹುತೇಕ ಕಾರ್ಮಿಕರು ಅನಾರೋಗ್ಯ ಪೀಡಿತರಾಗಿದ್ದು, ಅವರಿಗೆ ಉಚಿತವಾಗಿ ಆರೋಗ್ಯ ಸುರಕ್ಷತೆಯನ್ನು ಸರಕಾರ ನೀಡಬೇಕು. ಕಾರ್ಪೊರೇಟರ್‌ಗಳಿಗೆ ಲಕ್ಷ ಲಕ್ಷ ಕೋಟಿ ರೂ. ನೀಡುವ ಸರಕಾರ, ಭವಿಷ್ಯ ನಿಧಿ ಪಿಂಚಣಿದಾರರಿಗೆ ಕೇವಲ ಒಂದು ಸಾವಿರ ಕೋಟಿ ರೂ. ನೀಡಿದೆ. ಭವಿಷ್ಯ ನಿಧಿಯಲ್ಲಿ ಅನ್‌ಕ್ಲೈಮ್ಡ್ ಆಗಿರುವ ಸಾವಿರ ಕೋಟಿ ರೂ. ಉಳಿದುಕೊಂಡಿದೆ. ಇದರ ಬಡ್ಡಿಯಲ್ಲಿಯೇ ಪಿಂಚಣಿಯನ್ನು ಕೊಡಬಹುದಾಗಿದೆ ಎಂದರು.
ಸಿಐಟಿಯು ಜಿಲ್ಲಾ ಮುಖಂಡ ಎಚ್.ನರಸಿಂಹ ಮಾತನಾಡಿ, ಭವಿಷ್ಯ ನಿಧಿ ಇಲಾಖೆಯಲ್ಲಿರುವ ಸಾವಿರಾರು ಕೋಟಿ ಹಣವನ್ನೇ ಪಿಂಚಣಿಯಾಗಿ ಕೊಡಬಹುದು. ಆದರೆ ಆಳುವ ವರ್ಗಕ್ಕೆ ದುಡಿಯುವ ವರ್ಗದವರ ಬಗ್ಗೆ ಕಾಳಜಿ ಮತ್ತು ರಾಜಕೀಯ ಇಚ್ಛಾಶಕ್ತಿ ಇಲ್ಲ. ಈಗಲೂ ಪಿಂಚಣಿ ಹಣವನ್ನು ಸಾಕಷ್ಟು ತೊಂದರೆ, ಕಿರುಕುಳ ಅನುಭವಿಸಿಯೇ ಪಡೆದುಕೊಳ್ಳುತ್ತಿದ್ದೇವೆ. ನಾವು ಬೆವರು ಸುರಿಸಿ ಕಟ್ಟಿದ ಹಣವನ್ನು ಪಡೆಯಲು ಬೇಕಾದ ಕಾನೂನಿನ ಸುಧಾರಣೆಯನ್ನು ಸರಕಾರ ಮಾಡುತ್ತಿಲ್ಲ ಎಂದು ದೂರಿದರು.
ಮುಖ್ಯ ಅತಿಥಿಗಳಾಗಿ ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಬೀಡಿ ಸಂಘದ ಪ್ರಮುಖರಾದ ಬಲ್ಕೀಸ್ ಕುಂದಾಪುರ ಉಪಸ್ಥಿತರಿದ್ದರು.
ಸಂಘದ ಉಡುಪಿ ವಲಯ ಅಧ್ಯಕ್ಷೆ ಲಲಿತಾ ಸುವರ್ಣ ಗರಡಿಮಜಲು, ಕೋಶಾಧಿಕಾರಿ ಸುಂದರಿ ಕುಂದರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್ ಕುಂದರ್ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.
'ಉದ್ಯಮಿ ಪತಿಗಳ ಕೋಟಿ ಕೋಟಿ ತೆರಿಗೆ ಹಣ ಮನ್ನಾ ಮಾಡುವ ಸರಕಾರಕ್ಕೆ ಬಡ ಜನರಿಗೆ ಕೊಡಲು ಹಣ ಇಲ್ಲ ಹೇಳುತ್ತದೆ. ಒಂದೆಡೆ ಉಚಿತ ಕೊಟ್ಟರೆ ದೇಶ ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ಹೇಳುವವರು ಇನ್ನೊಂದೆಡೆ ಕಾರ್ಪೊ ರೇಟರ್‌ಗಳ ತೆರಿಗೆ ಹಣ ಮನ್ನಾ ಮಾಡಿ, ಅವರ ಸಂಪತ್ತು ಜಾಸ್ತಿ ಮಾಡಲು ಅನುಕೂಲವಾಗುವ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ. ನಿವೃತ್ತ ಪಿಂಚಣಿದಾರರಿಗೆ ಉತ್ತಮ ಜೀವನ ನಡೆಸಲು ಯಾವುದೇ ಸೌಲಭ್ಯಗಳನ್ನು ಸರಕಾರ ನೀಡುತ್ತಿಲ್ಲ’
-ಎಚ್.ನರಸಿಂಹ,
ಮುಖಂಡರು, ಸಿಐಟಿಯು