ಒಡಿಶಾ ದುರಂತ: ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಇತಿಹಾಸದಲ್ಲಿ ಎರಡನೇ 'ಕರಾಳ ಶುಕ್ರವಾರ'

ಹೊಸದಿಲ್ಲಿ: ಶುಕ್ರವಾರ ಸಂಜೆ ಒಡಿಶಾದ ಬಾಲಾಸೋರ್‌ನಲ್ಲಿ ಕೊರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ನೂರಾರು ಮಂದಿಯ ಪ್ರಾಣಬಲಿ ಪಡೆದು ದೇಶಾದ್ಯಂತ ಶೋಕದ ವಾತಾವರಣ ಸೃಷ್ಟಿಸಿರುವ ಘಟನೆಯು 2009 ರಲ್ಲಿ ಇದೇ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಅಪಘಾತ ಘಟನೆಯನ್ನು ನೆನಪಿಸಿದೆ.
ಕೊರಮಂಡಲ್ ಎಕ್ಸ್‌ಪ್ರೆಸ್ ಚೆನ್ನೈ ಮತ್ತು ಶಾಲಿವಾರ್ ನಡುವೆ ಸಂಚರಿಸುತ್ತದೆ. ಈ 27 ಗಂಟೆ ಹಾಗೂ ಐದು ನಿಮಿಷ ಅವಧಿ ಪ್ರಯಾಣದ ವೇಳೆ ರೈಲು 1,662 ಕಿಮೀ ದೂರ ಕ್ರಮಿಸುತ್ತದೆ. ಈ ರೈಲಿನ ಅತ್ಯುನ್ನತ ವೇಗ ಗಂಟೆಗೆ 130 ಕಿಮೀ ಆಗಿದೆ.
ಇದೇ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು 2009ರಲ್ಲಿ ದುರ್ಘಟನೆಗೀಡಾಗಿದ್ದಾಗ 16 ಜನರು ಮೃತಪಟ್ಟಿದ್ದರು. ಆ ರೈಲು ಅಪಘಾತ ಕೂಡ ಶುಕ್ರವಾರ ರಾತ್ರಿ ನಡೆದಿತ್ತು. ಫೆಬ್ರವರಿ13, 2009ರಂದು ನಡೆದ ಈ ಅಪಘಾತವು ರೈಲು ಜಜ್ಪುರ್ ರೋಡ್ ರೈಲ್ವೆ ನಿಲ್ದಾಣದ ಮೂಲಕ ಅತ್ಯಂತ ವೇಗವಾಗಿ ಸಂಚರಿಸುತ್ತಿದ್ದಾಗ ಹಾಗೂ ಹಳಿ ಬದಲಿಸುತ್ತಿದ್ದಾಗ ಸಂಭವಿಸಿತ್ತು. ರೈಲಿನ ಇಂಜಿನ್ ಇನ್ನೊಂದು ಹಳಿಗೆ ಬಿದ್ದಿದ್ದರೆ ಉಳಿದ ಬೋಗಿಗಳು ಹಳಿ ತಪ್ಪಿ ಬಿದ್ದವು. ಈ ಅಪಘಾತ ಕೂಡ ಸಂಜೆ 7.30ರಿಂದ 7.40ರ ಅವಧಿಯಲ್ಲಿ ಸಂಭವಿಸಿತ್ತು.