ಒಡಿಶಾ ರೈಲು ದುರಂತ: ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ ಪ್ರಕಟಿಸಿದ ಪ್ರಧಾನಿ

ಹೊಸದಿಲ್ಲಿ: ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (MAPINRF)ಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಧನ ಘೋಷಿಸಿದ್ದಾರೆ.
‘‘ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತ ನೋವುಂಟು ಮಾಡಿದೆ. ಈ ಸಂದರ್ಭ ಸಂತ್ರಸ್ತ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ’’ ಎಂದು ಪ್ರಧಾನಿ ಅವರು ಟ್ವೀಟ್ ಮಾಡಿದ್ದಾರೆ.
‘‘ಪರಿಸ್ಥಿತಿ ಅವಲೋಕಿಸುವ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಂಸತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುವುದು’’ ಎಂದು ಪ್ರಧಾನಿ ತಿಳಿಸಿದ್ದಾರೆ.
ರೈಲು ದುರಂತದಲ್ಲಿ ಮೃತಪಟ್ಟವರಿಗೆ 10 ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ರೈಲ್ವೆ ಸಚಿವರು ಘೋಷಿಸಿದ್ದಾರೆ.