ರೈಲ್ವೆ ಸಚಿವರು ರಾಜೀನಾಮೆ ನೀಡಲಿ: ಟಿಎಂಸಿ

ಕೋಲ್ಕತ್ತಾ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಭವ್ ಅವರು ರಾಜೀನಾಮೆ ನೀಡುವಂತೆ ಪಶ್ಚಿಮಬಂಗಾಲದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಶುಕ್ರವಾರ ಆಗ್ರಹಿಸಿದೆ.
ಕೇಂದ್ರ ಸರಕಾರ ಪ್ರತಿಪಕ್ಷಗಳ ನಾಯಕರ ಬೇಹುಗಾರಿಕೆ ನಡೆಸಲು ಸಾಫ್ಟ್ವೇರ್ ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಆದರೆ, ಇಂತಹ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಉಪಕರಣಗಳನ್ನು ಅಳವಡಿಸುವುದನ್ನು ನಿರ್ಲಕ್ಷಿಸುತ್ತಿದೆ ಎಂದು ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಭಿಷೇಕ್ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.
ಸಾರ್ವಜನಿಕರನ್ನು ದಾರಿ ತಪ್ಪಿಸುವ ಮೂಲಕ ರಾಜಕೀಯ ಬೆಂಬಲ ಪಡೆಯಲು ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಉತ್ತೇಜನ ನೀಡುತ್ತಿದೆ ಹಾಗೂ ನೂತನ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ. ಆದರೆ, ಸುರಕ್ಷಾ ಕ್ರಮಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರದ ಬೇಧಭಾವ ಹಾಗೂ ಅದರ ನೋಟು ಅಮಾನ್ಯೀಕರಣ, ಜಿಎಸ್ಟಿ, ಲಾಕ್ಡೌನ್, ಕೃಷಿ ಕಾಯ್ದೆಗಳು, ಅಸಮರ್ಪಕ ರೈಲ್ವೆ ಸುರಕ್ಷಾ ಕ್ರಮಗಳಿಂದ ಬಡವರು ಹಾಗೂ ಕಡೆಗಣಿಸಲ್ಪಟ್ಟವರು ನೋವು ಅನುಭವಿಸುತ್ತಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ