ಒಡಿಶಾ ರೈಲು ದುರಂತಕ್ಕೆ ಕಾರಣವೇನು?: ಪ್ರಾಥಮಿಕ ತನಿಖಾ ವರದಿ ಇಲ್ಲಿದೆ

ಭುವನೇಶ್ವರ: ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮೈನ್ ಲೈನ್ ಗೆ ಪ್ರವೇಶಿಸುವ ಬದಲು ಲೂಪ್ ಲೈನ್ ಗೆ ಪ್ರವೇಶಿಸಿತು ಹಾಗೂ ಅಲ್ಲಿ ಈಗಾಗಲೇ ನಿಲ್ಲಿಸಿದ್ದ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆಯಿತು ಎಂದು ಪ್ರಾಥಮಿಕ ತನಿಖಾ ವರದಿ ಶನಿವಾರ ಬಹಿರಂಗ ಪಡಿಸಿದೆ.
ರೈಲು ಸಂಖ್ಯೆ 12841 ಸಾಲಿಮಾರ್-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಗೆಅಪ್ ಮೈನ್ ಲೈನ್ ಮೂಲಕ ಹಾದು ಹೋಗಲು ಸಿಗ್ನಲ್ ನೀಡಲಾಗಿತ್ತು. ಅನಂತರ ಈ ಸಿಗ್ನಲ್ ಅನ್ನು ಹಿಂದೆ ಪಡೆಯಲಾಗಿತ್ತು ಎಂದು ರೈಲ್ವೆ ಅಧಿಕಾರಿಗಳ ತಂಡ ನಡೆಸಿದ ಪ್ರಾಥಮಿಕ ತನಿಖಾ ವರದಿ ಪ್ರತಿಪಾದಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಆದರೆ, ಆರಂಭದಲ್ಲಿ ಸಿಗ್ನಲ್ ನೀಡಿ, ಅನಂತರ ಹಿಂದೆ ಪಡೆದಿರುವುದಕ್ಕೆ ವರದಿಯಲ್ಲಿ ಕಾರಣ ಸ್ಪಷ್ಟಪಡಿಸಿಲ್ಲ.
ಸಿಗ್ನಲ್ ಹಿಂಪಡೆದಿರುವುದರಿಂದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಸಮೀಪದ ಲೂಪ್ ಲೈನ್ ಗೆ ಪ್ರವೇಶಿಸಿತು ಹಾಗೂ ಅಲ್ಲಿ ನಿಲ್ಲಿಸಲಾಗಿದ್ದ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಗೂಡ್ಸ್ ರೈಲು ಹಳಿ ತಪ್ಪಿತು. ಈ ನಡುವೆ ರೈಲು ಸಂಖ್ಯೆ 12864 ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಡೌನ್ ಮೈನ್ ಲೈನ್ ಗೆ ಪ್ರವೇಶಿಸಿತು. ಇದರಿಂದ ಅದರ ಎರಡು ಬೋಗಿಗಳು ಹಳಿ ತಪ್ಪಿದವು ಹಾಗೂ ಉರುಳಿದವು ಎಂದು ಪ್ರಾಥಮಿಕ ತನಿಖಾ ವರದಿ ಹೇಳಿದೆ.
ಲೂಪ್ ಲೈನ್ ಪ್ರವೇಶಿಸಿದ ಕೋರಮಂಡಲ್ ಎಕ್ಸ್‌ಪ್ರೆಸ್ ನ 21ಕ್ಕೂ ಹೆಚ್ಚಿನ ಬೋಗಿಗಳು ಹಳಿ ತಪ್ಪಿವೆ ಹಾಗೂ ಕೆಲವು ಉರುಳಿವೆ. ಗಾರ್ಡ್ ಬ್ರೇಕ್ ವ್ಯಾನ್ ಹಾಗೂ ಎಚ್-1 (ಫಸ್ಟ್ ಎಸಿ) ಬೋಗಿಗಳು ಅಪ್ ಮೈನ್ ಲೈನ್ ನಲ್ಲಿ ಕಂಡು ಬಂದಿವೆ. ರೈಲಿನ ಎಂಜಿನ್ ಗೂಡ್ಸ್ ನ ಮೇಲೆ ಕಂಡು ಬಂದಿದೆ.
ಕೊರಮಂಡಲ್ ಎಕ್ಸ್‌ಪ್ರೆಸ್ ಗಂಟೆಗೆ 128 ಕಿ.ಮೀ. ವೇಗದಲ್ಲಿ ಹಾಗೂ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್‌ಪ್ರೆಸ್ ಗಂಟೆಗೆ 116 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.