ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ರಾಜ್ಯ ಸರ್ಕಾರದಿಂದಲೇ ಸುಪ್ರೀಂಗೆ ಅರ್ಜಿ: ಸಚಿವ ಮಧುಬಂಗಾರಪ್ಪ

ಶಿವಮೊಗ್ಗ, ಜೂ.03: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ಪತ್ರ ವಿಚಾರವಾಗಿ ಶೀಘ್ರವೇ ಈ ಕುರಿತು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿ ಹಂಚಿಕೆ ಕುರಿತು ರಾಜ್ಯದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ತಿರಸ್ಕೃರಿಸಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಅನುಮತಿಗಾಗಿ ಸಂತ್ರಸ್ತರ ಪರವಾಗಿ ರಾಜ್ಯ ಸರ್ಕಾರವೇ ಅರ್ಜಿ ಸಲ್ಲಿಸಲಿದೆ ಎಂದು ಹೇಳಿದರು.
ಶೀಘ್ರದಲ್ಲೇ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮತ್ತು ಕಂದಾಯ ಹಾಗೂ ಅರಣ್ಯ ಇಲಾಖೆ ಸಚಿವರು ಆಗಮಿಸಿ ಉನ್ನತ ಮಟ್ಟದ ಸಭೆ ನಡೆಸಿ, ಸಂತ್ರಸ್ತರ ಪರವಾದ ನಿರ್ಣಯ ಕೈಗೊಳ್ಳಲಿದ್ದಾರೆ.ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದರು.
ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಡಿಸಿ ಕಚೇರಿಯಿಂದ ರಿಜೆಕ್ಟ್ ಆದವರು ಪುನಃ ಅರ್ಜಿ ಸಲ್ಲಿಸಬಹುದು.ಭೂಗಳ್ಳರು ಎಂದು ರೈತರ ವಿರುದ್ಧ ಹಾಕಿದ ಕೇಸ್ ಗಳನ್ನು ಈ ಹಿಂದಿನ ಸರ್ಕಾರ ಈಗಾಗಲೇ ಹಿಂಪಡೆದಿದೆ ಎಂದರು.
ಶಿಕ್ಷಕರ ಕೌನ್ಸಿಲಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರು ಕೆಲಸ ಮಾಡುವ ನಿರ್ಧಾರ ಕೈಗೊಳ್ಳಬೇಕು.ಗ್ರಾಮೀಣ ಪ್ರದೇಶದಲ್ಲಿ ಅತಿಥಿ ಶಿಕ್ಷಕರು ಬೇಡ ಖಾಯಂ ಶಿಕ್ಷಕರನ್ನು ನೀಡಿ ಎಂಬ ಅಭಿಪ್ರಾಯವಿದೆ.ಜಿಲ್ಲೆಯಲ್ಲಿ 52 ಶಾಲೆಗಳಲ್ಲಿ ಶಿಕ್ಷಕರು ಇಲ್ಲ .ನಾನು ಮಂತ್ರಿಯಾದ ತಕ್ಷಣವೇ ಶಾಲಾ ಶಿಕ್ಷಕರ ವರ್ಗಾವಣೆಗೆ ಅಧಿಸೂಚನೆ ಹೊರಡಿಸಿದ್ದೇನೆ. ಹೈದರಾಬಾದ್ ಕರ್ನಾಟಕದ ಶಿಕ್ಷಕರ ವರ್ಗಾವಣೆ ಕೂಡ ಕೌನ್ಸಿಲಿಂಗ್ ಮೂಲಕವೇ ನಡೆಯಲಿದೆ.ಶಿಕ್ಷಣ ಇಲಾಖೆಯ 10 ಕೋಟಿ ಬೇಡಿಕೆ ಇದ್ದು ಈಗಾಗಲೇ ಒಂದು ಕೋಟಿ ಕೊಡಲಾಗಿದೆ.ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಶಿಕ್ಷಕರ ಕೊರತೆಯನ್ನು ನೀಗಿಸಿ ನೇಮಕ ಮಾಡಲಾಗುವುದು ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರ ವಿಚಾರವಾಗಿ ಪ್ರತಿಕ್ರಿಯಿಸಿ,ವಿ ಮಾನ ಸಂಚಾರದ ಮಾರ್ಗಸೂಚಿ ಮತ್ತು ಏರ್ ಲೈನ್ಸ್ ಸಂಸ್ಥೆ ಒಂದು ಸಂಚರಿಸಲು ಅನುಮತಿ ಕೇಳಿದೆ. ಈ ಬಗ್ಗೆ ಕಾನೂನು ಬದ್ಧವಾಗಿ ಅನುಮತಿ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.