ತಲೆ ಬೋಳಿಸುವ ನನ್ನ ಮಾತಿಗೆ ಈಗಲೂ ಬದ್ಧ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬೇಕಾಬಿಟ್ಟಿಯಾಗಿ ಘೋಷಿಸಿರುವ 5 ಉಚಿತಗಳ ಗ್ಯಾರಂಟಿಗಳನ್ನು ಯಾವುದೇ ಷರತ್ತುಗಳಿಲ್ಲದೆ ಯಥಾಪ್ರಕಾರ 5 ವರ್ಷ ಪೂರ್ತಿ ಅನುಷ್ಠಾನಗೊಳಿಸಿದರೆ 2028 ಮೇ ತಿಂಗಳಲ್ಲಿ ತಲೆ ಬೋಳಿಸಿ ಕೆಪಿಸಿಸಿ ಕಚೇರಿಯ ಮುಂದೆ ಕುಳಿತುಕೊಳ್ಳುವ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ನಿರಂತರ ಸುಳ್ಳು ಹೇಳಿಕೆಗಳಲ್ಲಿ ನಿರತರಾಗಿರುವ ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿರುವುದನ್ನು ಮೊದಲು ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಅವರು ಸವಾಲೆಸೆದಿದ್ದಾರೆ.
ಕಾಂಗ್ರೆಸ್ ಈ ಹಿಂದೆ ರಾಜಸ್ಥಾನ, ಹಿಮಾಚಲ ಪ್ರದೇಶ, ಮಣಿಪುರ ರಾಜ್ಯಗಳಲ್ಲಿ ಚುನಾವಣಾ ಸಂದರ್ಭದಲ್ಲಿ ಇದೇ ಮಾದರಿಯ ಉಚಿತ ಖಚಿತಗಳ ಘೋಷಣೆಗಳನ್ನು ಮಾಡಿ ಯಾವುದನ್ನೂ ಈಡೇರಿಸದೆ ಜನರಿಗೆ ಪಂಗನಾಮ ಹಾಕಿದೆ. ಉಚಿತ ಭಾಗ್ಯಗಳನ್ನು ನೀಡಿದ ಅನೇಕ ರಾಷ್ಟ್ರಗಳು ದಿವಾಳಿ ಹೊಂದಿರುವ ಉದಾಹರಣೆಗಳು ಕಣ್ಣ ಮುಂದಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಉಚಿತ ಗ್ಯಾರಂಟಿಗಳನ್ನು 5 ವರ್ಷ ಪೂರ್ತಿ ಯಥಾವತ್ತಾಗಿ ಜಾರಿಗೊಳಿಸುವ ಸಾಧ್ಯತೆ ಇಲ್ಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಾಬರ ಮನೆಯಲ್ಲಿ 2-3 ಹೆಂಡ್ತಿ ಇದ್ದಾರೆ...: ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ
*ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಘೋಷಿಸಿರುವ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ವಾಗ್ದಾನ ನೀಡಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಕೊಟ್ಟ ಮಾತನ್ನು ತಪ್ಪಿದೆ. ಮಾತು ತಪ್ಪಿದ ಈ ಸರಕಾರ ಗ್ಯಾರಂಟಿಗಳಿಗೆ ಹೊಸ ಷರತ್ತುಗಳನ್ನು ಹಾಕುವ ಮೂಲಕ ತನ್ನ ಉಚಿತ ಖಚಿತ ಖಂಡಿತ ನಿಶ್ಚಿತಗಳ ಭರವಸೆಯನ್ನು ಮುರಿದಿದೆ. ಆದರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಗ್ಯಾರಂಟಿ ಕಾರ್ಡಿನ ಎಲ್ಲಾ 5 ಭರವಸೆಗಳನ್ನು ಈಗಾಗಲೇ ನೆರವೇರಿಸಿದ ಹಾಗೆ ಪೌರುಷ ತೋರುವುದು ನಾಚಿಕೆಗೇಡು.
*ರಾಜ್ಯ ಕಾಂಗ್ರೆಸ್ ಸರಕಾರ ಗೃಹ ಜ್ಯೋತಿಯಡಿ 200 ಯುನಿಟ್ ವಿದ್ಯುತ್ತನ್ನು ಯಥಾವತ್ತಾಗಿ ಉಚಿತವಾಗಿ ನೀಡದೇ ವಂಚಿಸಿರುವ ಜೊತೆಗೆ ಹಠಾತ್ತಾಗಿ ಪ್ರತೀ ಯುನಿಟ್ ಗೆ ರೂ.2 ರಂತೆ ವಿದ್ಯುತ್ ದರವನ್ನು ಏರಿಸಿ ರಾಜ್ಯದ ಜನತೆಗೆ ಶಾಕ್ ನೀಡಿರುವುದು ಹೇಡಿತನದ ಸಂಕೇತವಾಗಿದೆ.
*ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಗ್ಯಾರಂಟಿಯಡಿ ಸರಕಾರಿ ಬಸ್ ವ್ಯವಸ್ಥೆಗಳಿಲ್ಲದ ಹಲವಾರು ಜಿಲ್ಲೆಗಳ ಮಹಿಳೆಯರು ಅವಕಾಶ ವಂಚಿತರಾಗಿದ್ದಾರೆ. ಈ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡದಿರುವುದು ವಿಪರ್ಯಾಸ.
*ಕಾಂಗ್ರೆಸ್ ಸರಕಾರ ಗೃಹಲಕ್ಷ್ಮಿ ಗ್ಯಾರಂಟಿಯನ್ನು ಮುಂದೂಡಿ, ಮನೆಯೊಡತಿ ವಿಚಾರದಲ್ಲಿ ಗೊಂದಲ ಸೃಷ್ಟಿಸಿ, ಆನ್ ಲೈನ್ ಅರ್ಜಿ ಎಂಬ ಸಬೂಬು ನೀಡಿ ಕಾಲಹರಣ ಮಾಡುವ ಮೂಲಕ ಜನತೆಯನ್ನು ಸತಾಯಿಸುತ್ತಿರುವುದು ವಿಷಾದನೀಯ.
*ಅನ್ನಭಾಗ್ಯ ಗ್ಯಾರಂಟಿಯನ್ನು ಮುಂದೂಡಿರುವ ರಾಜ್ಯ ಕಾಂಗ್ರೆಸ್ ಸರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಪ್ರಸಕ್ತ ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುತ್ತಿರುವ ಉಚಿತ 5 ಕೆ.ಜಿ. ಅಕ್ಕಿಯನ್ನೂ ಸೇರಿಸಿ, ಇನ್ನೂ ಹೆಚ್ಚುವರಿ 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡುವಂತೆ ಕೇಂದ್ರ ಸರಕಾರದ ಮೊರೆ ಹೋಗಿರುವುದು ನಾಚಿಕೆಗೇಡು. ಕಾಂಗ್ರೆಸ್ ಅಕ್ಕಿ ಹಂಚಿಕೆಯಲ್ಲಿಯೂ ಮೋಸದ ತಂತ್ರ ಅನುಸರಿಸಿದೆ.
*ಯುವನಿಧಿ ಗ್ಯಾರಂಟಿಯಡಿ ಎಲ್ಲಾ ನಿರುದ್ಯೋಗಿ ಪದವೀಧರ ಯುವಕರಿಗೆ ಮಾಸಿಕ ಮಾಶಾಸನ ನೀಡುವುದಾಗಿ ಬೊಗಳೆಬಿಟ್ಟಿರುವ ಕಾಂಗ್ರೆಸ್ ಗ್ಯಾರಂಟಿ ಜಾರಿಯ ದಿನಾಂಕವನ್ನೂ ಪ್ರಕಟಿಸದೆ, ಈ ಸೌಲಭ್ಯ ಪ್ರಸಕ್ತ ಸಾಲಿನಲ್ಲಿ ತೇರ್ಗಡೆ ಹೊಂದಿರುವ ಪದವೀಧರರಿಗೆ ಮಾತ್ರ ಅನ್ವಯ ಎನ್ನುವ ಮೂಲಕ ಯುವ ಸಮುದಾಯಕ್ಕೆ ದ್ರೋಹ ಬಗೆದಿದೆ.
*ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರದ ದುರಾಸೆಯಿಂದ ಉಚಿತ ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ರಾಜ್ಯವನ್ನು ದಿವಾಳಿತನಕ್ಕೆ ದೂಡಲು ಹರಸಾಹಸ ಪಡುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಸರಕಾರ ರಾಜ್ಯದ ಜನತೆಗೆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಆದಾಯದ ಮೂಲದ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸುವುದು ಅತ್ಯಗತ್ಯ.
*ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ 24 ಗಂಟೆಗಳೊಳಗೆ ಜಾರಿಗೊಳಿಸಲು ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ಈ ಎಲ್ಲಾ ಹುಳುಕುಗಳನ್ನು ಮುಚ್ಚಿಟ್ಟು ಸಾಚಾತನದ ಪೋಸ್ ನೀಡುತ್ತಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಬರೇ ಪ್ರಚಾರದ ಗೀಳಿನಿಂದ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಇತರರನ್ನು ಗೇಲಿ ಮಾಡುವ ಬದಲು ಅಷ್ಟೊಂದು ತುರ್ತು ಇದ್ದಲ್ಲಿ ತಾವೇ ತಲೆ ಬೋಳಿಸಿಕೊಳ್ಳುವುದು ಉತ್ತಮ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.