ಪ್ರತ್ಯಾಕ್ರಮಣಕ್ಕೆ ಉಕ್ರೇನ್ ಸಿದ್ಧ: ಝೆಲೆನ್‌ಸ್ಕಿ

ಕೀವ್, ಜೂ.3: ರಷ್ಯಾ ಆಕ್ರಮಿತ ಪ್ರದೇಶವನ್ನು ವಶಪಡಿಸಿಕೊಳ್ಳಲು ಉಕ್ರೇನ್ ತನ್ನ ಬಹುನಿರೀಕ್ಷಿತ ಪ್ರತಿದಾಳಿಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಶನಿವಾರ ಹೇಳಿದ್ದಾರೆ.
ಇದು ಎಷ್ಟು ಕಾಲ ಮುಂದುವರಿಯಬಹುದು ಎಂದು ಈಗಲೇ ಹೇಳಲಾಗದು. ಪ್ರತ್ಯಾಕ್ರಮಣ ವಿವಿಧ ರೀತಿಯಲ್ಲಿ ನಡೆಯಬಹುದು. ಸಂಪೂರ್ಣ ಭಿನ್ನ ರೀತಿಯ ಆಕ್ರಮಣದ ಸಾಧ್ಯತೆಯಿದೆ. ಆದರೆ ನಾವದನ್ನು ಮಾಡಲಿದ್ದೇವೆ ಮತ್ತು ಅದಕ್ಕೆ ಸಿದ್ಧವಿದ್ದೇವೆ. ಇದರಲ್ಲಿ ಯಶಸ್ವಿಯಾಗುವ ಬಲವಾದ ವಿಶ್ವಾಸವಿದೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ರಶ್ಯವು 15 ತಿಂಗಳ ಹಿಂದೆ ವಶಕ್ಕೆ ಪಡೆದಿರುವ ಪ್ರದೇಶಗಳನ್ನು ಪ್ರತಿದಾಳಿಯ ಮೂಲಕ ಮರುವಶಕ್ಕೆ ಪಡೆಯುವುದು ಯುದ್ಧದ ಕ್ರಿಯಾಶೀಲತೆಯನ್ನು ಬದಲಿಸಬಹುದು ಎಂಬುದು ಉಕ್ರೇನ್ನ ಆಶಯವಾಗಿದೆ. ಪ್ರತಿ ಆಕ್ರಮಣ ಆರಂಭಿಸುವ ಮುನ್ನ ಪಾಶ್ಚಿಮಾತ್ಯ ಮಿತ್ರರಿಂದ ಇನ್ನಷ್ಟು ಶಸ್ತ್ರಸಜ್ಜಿತ ವಾಹನಗಳಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಕಳೆದ ತಿಂಗಳು ಝೆಲೆನ್‌ಸ್ಕಿ ಹೇಳಿದ್ದರು. ಈ ಮಧ್ಯೆ, ಕಳೆದ ಕೆಲ ವಾರಗಳಿಂದ ರಶ್ಯದ ಶಸ್ತ್ರಾಸ್ತ್ರ ಸಂಗ್ರಹಾಗಾರ ಮತ್ತು ಸೇನಾ ವ್ಯವಸ್ಥಾಪನಾ ಮಾರ್ಗಗಳನ್ನು ಗುರಿಯಾಗಿಸಿ ಉಕ್ರೇನ್ನ ಆಕ್ರಮಣ ಹೆಚ್ಚಿದೆ. ಪೂರ್ವದ ಡೊನೆಟ್ಸ್ಕ್ ಪ್ರಾಂತದ ಮರಿನಿಕ ಗ್ರಾಮವನ್ನು ಮರುವಶ ಮಾಡಿಕೊಳ್ಳುವುದು ಮೊದಲ ಗುರಿಯಾಗಿದೆ ಎಂದು ಉಕ್ರೇನ್ ಸೇನೆ ಹೇಳಿದೆ.