70 ಸಹ ಪ್ರಯಾಣಿಕರ ಜೀವ ಉಳಿಸಿದ ಐಐಟಿ ಉದ್ಯೋಗಿ, ಸೈನಿಕರು

ಬಲಸೋರ್: ತ್ರಿವಳಿ ರೈಲು ದುರಂತದಲ್ಲಿ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ಕನಿಷ್ಠ 70 ಮಂದಿ ಸಹ ಪ್ರಯಾಣಿಕರನ್ನು ಖರಗಪುರ ಐಐಟಿ ಉದ್ಯೋಗಿ ಹಾಗೂ ಇಬ್ಬರು ಸೈನಿಕರು ರಕ್ಷಿಸಿದ್ದು ಬೆಳಕಿಗೆ ಬಂದಿದೆ.
ಐಐಟಿ ಖರಗಪುರದಲ್ಲಿ ತಾಂತ್ರಿಕ ಸಿಬ್ಬಂದಿಯಾಗಿರುವ ಸುದ್ರಮಣಿ (50) ತಮ್ಮ ಕುಟುಂಬದ ಜತೆ ಚೆನ್ನೈಗೆ ತೆರಳಲು ಕೋರಮಂಡಲ ಎಕ್ಸ್ಪ್ರೆಸ್ ರೈಲು ಏರಿದ್ದರು. ದೇಶದ ಭೀಕರ ರೈಲು ದುರಂತದಲ್ಲಿ 70 ಮಂದಿಯ ಜೀವ ಉಳಿಸಲು ತಾವು ಕೊಡುಗೆ ನೀಡಬಹುದು ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲ.
"ನಾನು ಇದ್ದ ಬಿ3 ಬೋಗಿ ಭಾಗಶಃ ಹಳಿತಪ್ಪಿತ್ತು. ಆದರೆ ನಾವು ಪಾರಾದೆವು. ಆದರೆ ಸುಮಾರು 70 ಪ್ರಯಾಣಿಕರು ಇದ್ದ ಬಿ4 ಬೋಗಿ ಸಂಪೂರ್ಣ ಹಳಿತಪ್ಪಿತು. ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸಿಕ್ಕಿಹಾಕಿಕೊಂಡರು" ಎಂದು ವಿವರಿಸಿದ್ದಾರೆ.
"ನಾನು ಹಾಗೂ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸೇನಾ ಜವಾನರು ಬಿ4 ಬೋಗಿಯತ್ತ ಧಾವಿಸಿ ಕಿಟಕಿಯ ಗಾಜು ಒಡೆದು ಪ್ರಯಾಣಿಕರು ಹೊರಬರಲು ಅನುಕೂಲ ಮಾಡಿಕೊಟ್ಟೆವು. ಬಳಿಕ ರಾತ್ರಿ 9ರ ಸುಮಾರಿಗೆ ಮತ್ತೆ ನಾವು ಒಳಗೆ ಹೋಗಿ ಎಲ್ಲರ ಲಗೇಜ್ಗಳನ್ನು ಸುರಕ್ಷಿತವಾಗಿ ಹೊರತಂದೆವು" ಎಂದು ಹೇಳಿದ್ದಾರೆ.