ಪ್ಯಾರಿಸ್ ಸೇಂಟ್-ಜರ್ಮೈನ್‌ಗೆ ವಿದಾಯ ಹೇಳಿದ ಲಿಯೊನೆಲ್ ಮೆಸ್ಸಿ

ಪ್ಯಾರಿಸ್: ಫ್ರೆಂಚ್ ರಾಜಧಾನಿಯಲ್ಲಿ ಶನಿವಾರ ರಾತ್ರಿ ಲಿಯೊನೆಲ್ ಮೆಸ್ಸಿ (Lionel Messi)ಪ್ಯಾರಿಸ್ ಸೇಂಟ್-ಜರ್ಮೈನ್(ಪಿಎಸ್ ಜಿ) ಗಾಗಿ ತನ್ನ ವಿದಾಯದ ಪಂದ್ಯವನ್ನು ಆಡಿದರು. ಕ್ಲರ್ಮಾಂಟ್ ವಿರುದ್ಧದ ಈ ಪಂದ್ಯವನ್ನು ಪಿಎಸ್ ಜಿ 2-3 ಗೋಲುಗಳ ಅಂತರದಲ್ಲಿ ಕಳೆದುಕೊಂಡಿತು.
ಮೆಸ್ಸಿ ಹೆಸರನ್ನು ಹೇಳಿದಾಗ ಅಗೌರವ ತೋರಿದ PSG ಬೆಂಬಲಿಗರು ಬೊಬ್ಬೆ ಹೊಡೆದರು. ಕೆಲವು ನಿಮಿಷಗಳ ನಂತರ, ಮೆಸ್ಸಿ ನಗು ಮುಖದೊಂದಿಗೆ ಮೈದಾನ ಪ್ರವೇಶಿಸಿದರು, ತಂಡದ ಫೋಟೋಕ್ಕೆ ಪೋಸ್ ನೀಡುವ ಮೊದಲು ತನ್ನ ಮೂವರು ಮಕ್ಕಳ ಕೈಗಳನ್ನು ಹಿಡಿದು ಅವರ ಹಣೆಯ ಮೇಲೆ ಚುಂಬಿಸಿದರು.
“ನಾನು ಈ ಎರಡು ವರ್ಷಗಳಿಗಾಗಿ ಕ್ಲಬ್, ಪ್ಯಾರಿಸ್ ನಗರ ಮತ್ತು ಅದರ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ನಿಮಗೆ ಶುಭ ಹಾರೈಸುತ್ತೇನೆ’’ ಎಂದು ಕ್ಲಬ್ ವೆಬ್‌ಸೈಟ್‌ಗೆ ಮೆಸ್ಸಿ ತಿಳಿಸಿದರು.
PSG ನಲ್ಲಿ ಎರಡು ಋತು ಆಡಿರುವ ಮೆಸ್ಸಿ ಎರಡು ಫ್ರೆಂಚ್ ಲೀಗ್‌ಗಳು ಹಾಗೂ ಫ್ರೆಂಚ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದ್ದರು. ಎಲ್ಲಾ ಸ್ಪರ್ಧೆಗಳಲ್ಲಿ 32 ಗೋಲುಗಳನ್ನು ಗಳಿಸಿದ್ದು ಹಾಗೂ 35 ಅಸಿಸ್ಟ್ ಮಾಡಿದ್ದರು.
ಮೆಸ್ಸಿ ಒಂದು ವಾರದ ಹಿಂದೆ ಸ್ಟ್ರಾಸ್‌ಬರ್ಗ್‌ನಲ್ಲಿ 1-1 ಡ್ರಾ ಗೊಂಡಿರುವ ಪಂದ್ಯದಲ್ಲಿ, PSG ಗೆ ದಾಖಲೆಯ 11 ನೇ ಫ್ರೆಂಚ್ ಲೀಗ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದ್ದರು.
ವೃತ್ತಿಜೀವನದ 496 ನೇ ಲೀಗ್ ಗೋಲು ಗಳಿಸುವ ಮೂಲಕ, ಅರ್ಜೆಂಟೀನದ ಪ್ರತಿಭೆ ಮೆಸ್ಸಿ ಯುರೋಪ್‌ನ ಅಗ್ರ ಐದು ಲೀಗ್‌ಗಳಿಗಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸ್ಕೋರಿಂಗ್ ದಾಖಲೆಯನ್ನು ಮುರಿದರು.