ಇನ್ನು ಮುಂದೆ ಆಟ ನಡೆಯದು, ಗಲಾಟೆ ಮಾಡಿದರೆ ಜೈಲೇ ಗತಿ: ಸೂಲಿಬೆಲೆಗೆ ಸಚಿವ ಎಂ.ಬಿ ಪಾಟೀಲ್ ಎಚ್ಚರಿಕೆ
ವಿಜಯಪುರ: 'ಸಮಾಜದಲ್ಲಿ ಕೋಮು ಭಾವನೆ ಸೃಷ್ಟಿಸುವ ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯದು. ಗಲಾಟೆ ಮಾಡಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ' ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವನ್ನು ಹಿಟ್ಲರ್ ಸರ್ಕಾರಕ್ಕೆ ಹೋಲಿಸಿದಕ್ಕೆ ಸೂಲಿಬೆಲೆ ವಿರುದ್ಧ ಕಿಡಿಕಾರಿದರು.
''ಈ ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಅನಾಹುತ ಮಾಡಿದ್ದಾರೆ. ಸೂಲಿಬೆಲೆ ಮಾಡಿದ ಅನಾಹುತಗಳನ್ನ ಈಗ ನಾವು ಸರಿಪಡೆಸುತ್ತಿದ್ದೇವೆ. ಅಲ್ಲದೇ, ಪಠ್ಯಪುಸ್ತಕ, ಹಿಜಾಬ್, ಹಲಾಲ್, ಅಝಾನ್ ಅಂತ ನಾಟಕ ಮಾಡಿದ್ದಾರೆ. ಇದಕ್ಕೆಲ್ಲ ಇತಿಶ್ರೀ ಹಾಡುತ್ತೇವೆ'' ಎಂದರು.
''ಕೇಸರಿ ಬಣ್ಣ ಬರೀ ಬಿಜೆಪಿಯದ್ದಲ್ಲ''
''ಕೇಸರಿ ಬಣ್ಣ ಬರೀ ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ. ನಮ್ಮ ದೇವಸ್ಥಾನಗಳ ಮೇಲೆ ಕೇಸರಿ ಧ್ವಜವನ್ನೇ ಹಾರಿಸಲಾಗುತ್ತದೆ. ನಮ್ಮ ಮನೆಯಲ್ಲೂ ಕೇಸರಿ ಬಣ್ಣ ಬಳಕೆ ಮಾಡುತ್ತೇವೆ'' ಎಂದು ಸಚಿವರು ತಿರುಗೇಟು ನೀಡಿದರು.
ಇದನ್ನೂ ಓದಿ: ತರೀಕೆರೆ ಶಾಸಕರ ಅಭಿನಂದನೆ ಕಾರ್ಯಕ್ರಮದಲ್ಲಿ ಗಲಾಟೆ, ಯುವಕನ ಹತ್ಯೆ