ಪ್ರಧಾನಿ ಮೋದಿ ಹೇಳಿದಂತೆ ಅಶ್ವಿನಿ ವೈಷ್ಣವ್ ಗೆ ಮೊದಲು ಶಿಕ್ಷೆ ನೀಡಲಿ: ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತಕ್ಕೆ ಕಾರಣವಾದವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಗೆ ಮೊದಲು ಶಿಕ್ಷೆ ಪ್ರಕ್ರಿಯೆ ಆರಂಭಿಸಲಿ ಎಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.
275 ಜನರನ್ನು ಬಲಿತೆಗೆದುಕೊಂಡ ಹಾಗೂ 1,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಮೂರು ರೈಲು ಅಪಘಾತದ ನೈತಿಕ ಹೊಣೆಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ರವಿವಾರ ಆಗ್ರಹಿಸಿದೆ.
ಪ್ರಧಾನಿ ಅವರ “ಪಿಆರ್ ಗಿಮಿಕ್” “ಗಂಭೀರ ನ್ಯೂನತೆಗಳು, ಕ್ರಿಮಿನಲ್ ನಿರ್ಲಕ್ಷ್ಯ ಹಾಗೂ ಭಾರತೀಯ ರೈಲ್ವೆಯ ಸುರಕ್ಷತೆ ಮತ್ತು ಭದ್ರತೆಯನ್ನು ಸಂಪೂರ್ಣ ಕಡೆಗಣಿಸಿದೆ" ಎಂದು ಕಾಂಗ್ರೆಸ್ ತಿಳಿಸಿದೆ.
ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಶಕ್ತಿಸಿನ್ಹ್ ಗೋಹಿಲ್ ಹಾಗೂ ವಕ್ತಾರ ಪವನ್ ಖೇರ, ಒಡಿಶಾ ರೈಲು ಅಪಘಾತವು "ಸಂಪೂರ್ಣ ನಿರ್ಲಕ್ಷ್ಯ, ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳು, ಅಸಮರ್ಥತೆ ಹಾಗೂ ಮೋದಿ ಸರಕಾರದ ಧೋರಣೆಯಿಂದ ಉಂಟಾದ ಮಾನವ ನಿರ್ಮಿತ ವಿನಾಶವಾಗಿದೆ" ಎಂದು ಆರೋಪಿಸಿದರು.
‘ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ವೈಷ್ಣವ್ ರಿಂದ ಶಿಕ್ಷೆ ಆರಂಭಿಸಬೇಕು . ನಾವು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಒತ್ತಾಯಿಸುತ್ತೇವೆ ‘’ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ಈ ಹಿಂದೆ, ವಿರೋಧ ಪಕ್ಷಗಳಾದ ಟಿಎಂಸಿ, ಶಿವಸೇನೆ (ಯುಬಿಟಿ) ಮತ್ತು ಸಿಪಿಐ, ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ವೈಷ್ಣವ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದವು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಹಸಿರು ಬಾವುಟ ತೋರಿಸುವ ಪ್ರಧಾನಿ ಮೋದಿ , ಭಾರತೀಯ ರೈಲ್ವೇಯು ಸೂಕ್ಷ್ಮ ಮತ್ತು ನಿರ್ಣಾಯಕ ಮೂಲಸೌಕರ್ಯದ ನಿರ್ಲಕ್ಷ್ಯದಿಂದ ಸೊರಗುತ್ತಿರುವಾಗಲೂ ಭಾರತೀಯ ರೈಲ್ವೇಯಲ್ಲಿ ಈಗ ‘ಎಲ್ಲವೂ ಚೆನ್ನಾಗಿದೆ’ ಎಂಬ ಕಥೆಯನ್ನು ಸೃಷ್ಟಿಸಲು ಅವರೇ ಹೊಣೆಗಾರರು.
ಸಿಎಜಿ, ಸಂಸದೀಯ ಸ್ಥಾಯಿ ಸಮಿತಿಗಳು ಹಾಗೂ ತಜ್ಞರು ಹಲವು ಎಚ್ಚರಿಕೆಗಳನ್ನು ನೀಡಿದ್ದರೂ ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸಲು ಮೋದಿ ಸರಕಾರ ಏಕೆ ಖರ್ಚು ಮಾಡಲಿಲ್ಲ?" ಎಂದು ಖೇರ ಹಾಗೂ ಗೋಹಿಲ್ ಪ್ರಶ್ನಿಸಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.