ಖೇಲೋ ಇಂಡಿಯಾ ವಿವಿ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ಸಣ್ಣಕೆರೆಯ ಫಾಝಿಲ್ ರಹ್ಮಾನ್

ಚಿಕ್ಕಮಗಳೂರು: 3ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಶನಿವಾರ ಅದ್ದೂರಿ ತೆರೆ ಕಂಡಿದ್ದು, ವೇಯ್ಟ್ ಲಿಪ್ಟಿಂಗ್ ವಿಭಾಗದಲ್ಲಿ ಬೆಂಗಳೂರು ನಗರ ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಸಣ್ಣಕೆರೆ ಗ್ರಾಮದ ಫಾಝಿಲ್ ರಹ್ಮಾನ್ ದ್ವಿತೀಯ ಸ್ಥಾನ ವನ್ನು ಪಡೆದು ಬೆಳ್ಳಿಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೇ ತಿಂಗಳ 2 ಮತ್ತು 3 ರಂದು ಉತ್ತರ ಪ್ರದೇಶದ ಜಿಬಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ವೇಯ್ಟ್ ಲಿಪ್ಟಿಂಗ್ 102 ವಿಭಾಗದಲ್ಲಿ 271 ಕೆ.ಜಿ ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಅಲ್ ಅಮೀನ್ ಕಾಲೇಜಿನಲ್ಲಿ ಮೊದಲ ವರ್ಷದ ಇಂಗ್ಲಿಷ್ ಎಂ.ಎ.ವ್ಯಾಸಂಗ ಮಾಡುತ್ತಿರುವ ಫಾಝಿಲ್ ರಹ್ಮಾನ್ ರವರು ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ರಘುನಾಥ್ ಶೆಟ್ಟಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.
ಕಳೆದ ಮಾರ್ಚ್ 18 ರಂದು ಪಂಜಾಬ್ ನ ಚಂಡಿಗಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಖೇಲೋ ಇಂಡಿಯಾ ಸ್ವರ್ಧೆಗೆ ಅರ್ಹತೆ ಪಡೆದುಕೊಂಡಿದ್ದರು. ಮೈಸೂರು ದಸರಾ ಕ್ರೀಡಾಕೂಟ, ಯುವಜನ ಸಬಲೀಕರಣ ,ಕ್ರೀಡಾ ಪ್ರಾಧಿಕಾರ, ಉಜಿರೆಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟ ಹೀಗೆ ಹಲವಾರು ಕ್ರೀಡಾಕೂಟದಲ್ಲಿ ಹಲವು ಪದಕಗಳಿಗೆ ಕೊರಳೊಡ್ಡಿದ ಫಾಝಿಲ್ ರಹ್ಮಾನ್ ದೇಶದ ಮುಂದಿನ ಭರವಸೆಯ ಕ್ರೀಡಾಪಟು ವಾಗುವ ಭರವಸೆ ಮೂಡಿಸಿದ್ದಾರೆ.
ಫಾಝಿಲ್ ರಹ್ಮಾನ್ ಕೊಪ್ಪ ತಾಲೂಕು ಸಣ್ಣ ಕೆರೆ ಗ್ರಾಮದ ಅಬ್ದುಲ್ ರಹ್ಮಾನ್ ಮತ್ತು ಜಮೀಲ ದಂಪತಿಯ ಪುತ್ರರಾಗಿದ್ದಾರೆ.

.jpeg)

.jpeg)