ಖತರ್ ಜೈಲಿನಿಂದ ಬಿಡುಗಡೆಯಾಗಲು ಸಹಕರಿಸಿದ ಮುನವ್ವರ್ ಅಲಿ ಶಿಹಾಬ್ ತಂಙಳ್‌ರನ್ನು ಭೇಟಿಯಾದ ದಿವೇಶ್ ಲಾಲ್
'ಇದು ನೈಜ ಕೇರಳ ಸ್ಟೋರಿ' ಎಂದ ನೆಟ್ಟಿಗರು

ಮಲಪ್ಪುರಂ: ಮುಸ್ಲಿಂ ಲೀಗ್ ನ ಕೇರಳ ರಾಜ್ಯ ಕಾರ್ಯದರ್ಶಿ ಮತ್ತು ಧಾರ್ಮಿಕ ನಾಯಕ ಪಾಣಕ್ಕಾಡ್ ಸೈಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಅವರ ಮನೆ ಶನಿವಾರದಂದು ವಿಶೇಷ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ಖತರ್ ಜೈಲಿನಿಂದ ಬಿಡುಗಡೆಗೊಂಡಿದ್ದ ದಿವೇಶ್ ಲಾಲ್ ಎಂಬವರು ತಮ್ಮ ಕುಟುಂಬ ಸಮೇತ ವಿದೇಶದಿಂದ ತಂಙಳ್ ರ ನಿವಾಸಕ್ಕೆ ಆಗಮಿಸಿದ್ದರು.
ಈಜಿಪ್ಟ್ ನಾಗರಿಕನೋರ್ವನ ಕೊಲೆ ಆರೋಪದಲ್ಲಿ ಖತರ್ ಜೈಲಿನಲ್ಲಿದ್ದ ದಿವೇಶ್ ಲಾಲ್ ರನ್ನು ಲಕ್ಷಾಂತರ ರೂ. ದಂಡದ ಮೊತ್ತವನ್ನು ಪಾವತಿಸಿ ಬಿಡುಗಡೆ ಮಾಡುವಲ್ಲಿ ಮುನವ್ವರಲಿ ಶಿಹಾಬ್ ತಂಙಳ್ ಪ್ರಮುಖ ಪಾತ್ರ ವಹಿಸಿದ್ದರು. ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ತನ್ನ ಮನೆಗೂ ಹೋಗದೇ ದಿವೇಶ್ ಲಾಲ್ ಕೃತಜ್ಞತೆ ಸಲ್ಲಿಸಲು ತಮ್ಮ ಕುಟುಂಬದೊಂದಿಗೆ ತಂಙಳ್ ರ ಮನೆಗೆ ಆಗಮಿಸಿದ್ದರು ಎಂದು onmanorama.com ವರದಿ ಮಾಡಿದೆ.
ಕೇರಳದ ಕೊಡಪ್ಪನಕ್ಕಲ್ ಮನೆಯಲ್ಲಿ ಶಿಹಾಬ್ ತಂಙಳ್ ರನ್ನು ದಿವೇಶ್ ಲಾಲ್ ಕುಟುಂಬ ಭೇಟಿ ಮಾಡಿದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಹಂಚಿಕೊಂಡು, ಇದು ನಿಜವಾದ ಕೇರಳ ಸ್ಟೋರಿ ಎಂದು ಬಣ್ಣಿಸಿದ್ದಾರೆ.
ದಿವೇಶ್ ಲಾಲ್ ತಮ್ಮ ಕಾರ್ ಅನ್ನು ಪಾರ್ಕ್ ಮಾಡುವ ಸಂದರ್ಭ ಆಕಸ್ಮಿಕವಾಗಿ ಈಜಿಪ್ಟ್ ನಾಗರಿಕನೋರ್ವ ಕಾರು ಹರಿದು ಮೃತಪಟ್ಟಿದ್ದ. ಅಲ್ಲಿನ ಕಾನೂನಿನ ಪ್ರಕಾರ ಪರಿಹಾರ ಧನವಾಗಿ 46 ಲಕ್ಷ ರೂ. ಯನ್ನು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡಿದರೆ ದಿವೇಶ್ ಲಾಲ್ ರನ್ನು ಬಿಡುಗಡೆ ಮಾಡಲಾಗುವುದು ಎಂದು ಖತರ್ ನ ಅಧಿಕಾರಿಗಳು ತಿಳಿಸಿದ್ದರು.
ಕುಟುಂಬಿಕರು ಕೇವಲ 10 ಲಕ್ಷ ರೂ. ಮಾತ್ರ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ 26 ಲಕ್ಷ ರೂ.ಯನ್ನು ಕೆಲ ಸಂಘ ಸಂಸ್ಥೆಗಳ ಸಹಾಯದೊಂದಿಗೆ ಒಟ್ಟು ಸೇರಿಸಿದ್ದರು. ಉಳಿದ ಹತ್ತು ಲಕ್ಷ ರೂ.ಗಾಗಿ ಕುಟುಂಬವು ಶಿಹಾಬ್ ತಂಙಳ್ ರ ಮೊರೆ ಹೋಗಿತ್ತು. ಕೂಡಲೇ ಇದಕ್ಕೆ ಸ್ಪಂದಿಸಿದ್ದ ಮುನವ್ವರಲಿ ಶಿಹಾಬ್ ತಂಙಳ್ ಸಾಮಾಜಿಕ ತಾಣದಲ್ಲಿ ಹಣ ಸಂಗ್ರಹಕ್ಕೆ ಕರೆ ನೀಡಿ ಉಳಿದ 10 ಲಕ್ಷ ರೂ. ಸಂಗ್ರಹಿಸಿ ನೀಡಿದ್ದರು.
"ನನಗೆ ಈ ಸಂದರ್ಭವನ್ನು ಹಂಚಿಕೊಳ್ಳಲು ಪದಗಳಿಲ್ಲ. ತಂಙಳ್ ಹಣ ಸಂಗ್ರಹಿಸಲು ಹೇಳಿದ ಬಳಿಕ ನನ್ನ ಬಿಡುಗಡೆ ಇನ್ನೂ ಸುಲಭವಾಗಿದೆ. ಎಲ್ಲರಿಗೂ ಕೃತಜ್ಞತೆಗಳು" ಎಂದು ದಿವೇಶ್ ಲಾಲ್ ಹೇಳಿದ್ದಾರೆ.