ಹಳೆ ಪಿಂಚಣಿ ಯೋಜನೆ ಜಾರಿಗೆ ಸಂಘಟಿತ ಹೋರಾಟ ಅಗತ್ಯ: ಅಂಚೆ ನೌಕರರ ಅಧಿವೇಶನದಲ್ಲಿ ಖಂಡೋಜಿ ರಾವ್
ಉಡುಪಿ, ಜೂ.4: ಕಾರ್ಮಿಕ ಸಂಘದ ಚಳವಳಿಯು ಪ್ರಗತಿಯ ಕಡೆಗೆ ಹೆಜ್ಜೆ ಇಡುತ್ತಿದ್ದರೆ, ಈ ಹೊಸ ಪಿಂಚಣಿ ಯೋಜನೆಯು ಕಾರ್ಮಿಕರನ್ನು ಹಿಂದಕ್ಕೆ ಕೊಂಡೊಯ್ಯುವಂತೆ ಮಾಡುತ್ತಿದೆ. ಹಿಂದಿನ ಸರಕಾರ ಇದನ್ನು ಆರಂಭಿಸಿದರೆ ಈಗಿನ ಸರಕಾರ ಅದನ್ನು ಅನುಷ್ಠಾನಕ್ಕೆ ತಂದಿತು. ಇದರಿಂದ ಹಿಂದಿನವರು ಪಾಠ ಕಲಿತಿದ್ದಾರೆ ಮತ್ತು ಈಗಿನವರು ಮುಂದೆ ಪಾಠ ಕಲಿಯಬಹುದು. ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಸಂಘಟಿತರಾಗಿ ಹೋರಾಟ ಮಾಡಲೇ ಬೇಕಾಗಿದೆ. ಇದರಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್ ಸಿ ಕರ್ನಾಟಕ ವಲಯದ ಕಾರ್ಯದರ್ಶಿ ಹಾಗೂ ಎನ್‌ಎಪಿಇ ಗ್ರೂಪ್ ಸಿ ನವದೆಹಲಿ ಕೇಂದ್ರೀಯ ಸ್ಥಾನದ ಕಾರ್ಯಾಧ್ಯಕ್ಷ ಎಸ್.ಖಂಡೋಜಿ ರಾವ್ ಹೇಳಿದ್ದಾರೆ.
ಉಡುಪಿ ಬನ್ನಂಜೆ ಶ್ರೀನಾರಾಯಣಗುರು ಮಂದಿರ ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್ ಸಿ, ಪೋಸ್ಟ್ ಮೆನ್-ಎಂಟಿಎಸ್ ಮತ್ತು ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗೀಯ ಶಾಖೆಗಳ 17ನೇ ಜಂಟಿ ದ್ವೈವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹೊಸ ಪಿಂಚಣಿ ಯೋಜನೆಯಂತೆ ನಮ್ಮ ಹಣವನ್ನು ಷೇರು ಮಾರು ಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇದಕ್ಕೆ ಯಾವುದೇ ಭದ್ರತೆಗಳಿಲ್ಲ. ಹೊಸ ಸ್ಕೀಮ್‌ನಲ್ಲಿ 8-10ವರ್ಷ ಸೇವೆ ಮಾಡಿದವರು ಕೇವಲ 2000-3000 ರೂ. ಪಿಂಚಣಿ ಪಡೆದರೆ, ಹಳೆಯ ಸ್ಕೀಮ್‌ನಲ್ಲಿ ಕನಿಷ್ಠ 9700ರೂ. ಪಿಂಚಣಿ ದೊರೆ ಯುತ್ತದೆ. ಕೆಲವು ರಾಜ್ಯಗಳು ಹೊಸ ಸ್ಕಿಮ್‌ನ್ನು ಈವರಗೆ ಅನುಷ್ಠಾನ ಮಾಡಿಲ್ಲ. ಆದರೆ ಕೇಂದ್ರ ಸರಕಾರ ಈಗಾಗಲೇ ಹೂಡಿಕೆ ಮಾಡಿರುವ ಹಣವನ್ನು ರಾಜ್ಯ ಸರಕಾರಕ್ಕೆ ಮರು ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹಾಗೆ ಮಾಡಿದರೆ ಹಳೆ ಸ್ಕೀಮ್ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಇದರ ವಿರುದ್ಧ ಹೋರಾಟ ಒಂದೇ ದಾರಿಯಾಗಿದೆ ಎಂದು ಅವರು ತಿಳಿಸಿದರು.
ಇಂದು ಅಂಚೆ ನೌಕರರು ನೆಟ್‌ವರ್ಕ್, ಸರ್ವರ್ ಸಮಸ್ಯೆ ಮತ್ತು ಕೆಲಸದ ಒತ್ತಡದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ನಾವು ಈ ಕಷ್ಟಗಳ ಜೊತೆ ಹೊಂದಿಕೊಂಡು ಹೋಗುತ್ತಿದ್ದೇವೆ. ಆದರೆ 2024ರ ನಂತರ ಆಗುವ ಮಹತ್ತರ ಬದಲಾವಣೆಯಲ್ಲಿ ನಾವು ಹೊಡೆದಾಡುವ ಸ್ಥಿತಿ ಬರಬಹುದಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಬ್ಯಾಂಕ್‌ಗಳ ವಿಲೀನ, ಬಿಎಸ್ ಎನ್‌ಎಲ್ ಹಾಗೂ ರೈಲ್ವೆ ಇಲಾಖೆಗಳ ಖಾಸಗೀರಕಣಗಳ ನಡುವೆಯೂ ಅಂಚೆ ಇಲಾಖೆ ಏನು ಕಳೆದುಕೊಳ್ಳದೆ ಉತ್ತಮ ಸ್ಥಿತಿಯಲ್ಲಿದೆ. ಇದಕ್ಕೆ ಕಾರಣ ಇಲಾಖೆ ನೌಕರರು ಮತ್ತು ಸಂಘಟನೆಗಳ ಹೋರಾಟಗಳು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಯು. ಮುರಳೀಧರನ್ ಅವರಿಗೆ ಕೆ.ಎಸ್.ಅರಸ್ ಸಂಸ್ಮರಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ನವೀನ್‌ಚಂದರ್, ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್, ಮಣಿಪಾಲ ಅಂಚೆ ವ್ಯವಹಾರ ಕೇಂದ್ರ ಅಧೀಕ್ಷಕ ಬಿ.ಶಂಕರ್, ರಾಷ್ಟ್ರೀಯ ಅಂಚೆ ನೌಕರರ ಸಂಘದ ವಲಯ ಕಾರ್ಯದರ್ಶಿ ಆರ್.ಮಹ ದೇವ, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಚಿತ್ರ ಸೇನ, ಯೂನಿಯನ್ ನೆಟ್‌ವರ್ಕ್ ಇಂಟರ್‌ನ್ಯಾಶನಲ್ ಇಂಡಿಯನ್ ಲಯಾಸನ್ ಕೌನ್ಸಿಲ್‌ನ ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಡಿ.ಎಂ. ಮುಖ್ಯ ಅತಿಥಿಗಳಾಗಿದ್ದರು.
ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್ ಸಿ ಉಡುಪಿ ವಿಭಾಗದ ಅಧ್ಯಕ್ಷ ಸುರೇಶ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಚೆ ಸಹಾಯಕ ರಾಮಕೃಷೃ ಜೋಷಿ ಸ್ವಾಗತಿಸಿದರು. ಗ್ರೂಪ್ ಸಿ ವಿಭಾಗೀಯ ಕಾರ್ಯದರ್ಶಿ ಪ್ರವೀಣ್ ಜತ್ತನ್ ಕಾರ್ಯಕ್ರಮ ನಿರೂಪಿಸಿದರು.