ಜೂನ್ 6ರಂದು ಕರ್ನಾಟಕಕ್ಕೆ ಮುಂಗಾರು ಆಗಮನ ನಿರೀಕ್ಷೆ: ಹವಾಮಾನ ಇಲಾಖೆ

ಮಂಗಳೂರು: ನೈಋತ್ಯ ಮುಂಗಾರು ಆಗಮನ ಈ ಬಾರಿ ತಡವಾಗಿದ್ದು, ಜೂ.6ರಿಂದ 9ರೊಳಗಾಗಿ ಕರ್ನಾಟಕ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ(ಐಎಂಡಿ) ಮೂಲಗಳು ತಿಳಿಸಿವೆ.
ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುತ್ತದೆ. ಆದರೆ ಈ ಬಾರಿ ತಡ ವಾಗಿದೆ. ನೈರುತ್ಯ ಮುಂಗಾರು ಶೀಘ್ರದಲ್ಲೇ ದೇಶವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ, ಮಾನ್ಸೂನ್ ಕೇರಳದ ಕರಾವಳಿಯಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಇದೀಗ ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶವನ್ನು ಪ್ರವೇಶಿಸಿದೆ. ಮತ್ತೊಂದೆಡೆ, ಮಾನ್ಸೂನ್ ದಕ್ಷಿಣ ಬಂಗಾಳ ಕೊಲ್ಲಿ ಮತ್ತು ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಮುಂದುವರಿಯುತ್ತಿದೆ. ಹಾಗಾಗಿಯೇ ಕೇರಳಕ್ಕೆ ಮುಂಗಾರು ಶೀಘ್ರದಲ್ಲೇ ಪ್ರವೇಶಿಸುವ ಸಾಧ್ಯತೆ ಇದೆ.
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ನೀಡಿರುವ ಮಾಹಿತಿ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
2022ರಲ್ಲಿ ಮೇ 29 ಆರಂಭ: ಕಳೆದ ವರ್ಷ ಮೇ 29ರಂದು ಮುಂಗಾರು ಆರಂಭವಾಗಿತ್ತು. ಐದು ವರ್ಷಗಳತ್ತ ನೋಡಿದರೆ ಮಾನ್ಸೂನ್ 2018 ಮತ್ತು 2022ರಲ್ಲಿ ಮೇ 29 ರಂದು, 2021ರಲ್ಲಿ ಜೂನ್ 3 ಮತ್ತು 2020 ರಲ್ಲಿ ಜೂನ್ 1 ರಂದು , 2019ರಲ್ಲಿ ಜೂನ್ 8ರಂದು ಕೇರಳ ತಲುಪಿತ್ತು.