ಬೇಲೂರು: ಕಾರಿನಲ್ಲಿ ಮಲಗಿದ್ದ ಯುವಕ ಅನುಮಾನಾಸ್ಪದ ಸಾವು

ಹಾಸನ: ಕಾರಿನಲ್ಲಿ ಮಲಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದ ಕುವೆಂಪು ನಗರ ಬಡಾವಣೆಯಲ್ಲಿ ವರದಿಯಾಗಿದೆ.
ಚೇತನ್ (24) ಮೃತ ಯುವಕ ಎಂದು ಗುರುತಿಸಲಾಗಿದೆ.
ಬೇಲೂರು ಪಟ್ಟಣದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಶನಿವಾರ ರಾತ್ರಿ ಕುವೆಂಪು ನಗರ ಬಡಾವಣೆಯ ಮೊಬೈಲ್ ಅಂಗಡಿ ಎದುರು ಕಾರು ನಿಲ್ಲಿಸಿ ಸ್ನೇಹಿತರಾದ ಗೌತಮ್, ದರ್ಶನ್, ಮಿಥುನ್ ಎಂಬುವವರ ಜತೆ ಪಾರ್ಟಿಗೆ ತೆರಳಿದ್ದ ಎನ್ನಲಾಗಿದೆ.
ರಾತ್ರಿ ಹನ್ನೆರಡು ಗಂಟೆಯವರೆಗೆ ಗೌತಮ್ ರೂಮಿನಲ್ಲಿ ಪಾರ್ಟಿ ಮಾಡಿದ್ದ ಸ್ನೇಹಿತರು ಬಳಿಕ ಅಲ್ಲಿಂದ ಮನೆಯತ್ತ ತೆರಳಿದ್ದಾರೆ. ಆದರೆ, ಚೇತನ್ ಮನೆಗೆ ತೆರಳದೆ ಕಾರಿನಲ್ಲಿಯೇ ಮಲಗಿದ್ದ ಎನ್ನಲಾಗಿದೆ.
ರವಿವಾರ ಬೆಳಗ್ಗೆ 10 ಗಂಟೆಗೆ ಗೌತಮ್ ಕಾರಿನ ಬಾಗಿಲು ತೆರೆದು ನೋಡಿದಾಗ ಚೇತನ್ ಮೃತಪಟ್ಟ ವಿಷಯ ತಿಳಿದಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಪರಿಶೀಲನೆ ನಡೆಸಿದ್ದಾರೆ.
ಇನ್ನು 'ಇದು ಆಕಸ್ಮಿಕ ಸಾವಲ್ಲ ಕೊಲೆ' ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಸರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.