ಒಡಿಶಾ ರೈಲು ದುರಂತ: ಪವಾಡ ಸದೃಶವಾಗಿ ಪಾರಾದ 8 ತಿಂಗಳ ಮಗು

ಬಹನಾಗ: ಒಡಿಶಾದ ಬಹನಾಗದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 8 ತಿಂಗಳ ಮಗು ದಿವ್ಯಾ ಕುಮಾರಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದಾಳೆ.
ಆಕೆಯ ಹೆತ್ತವರು ಹಾಗೂ ಮೂವರು ಸಹೋದರಿಯರು ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎಲ್ಲರೂ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್‌ನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ತಲೆ ಕೆಳಗಾಗಿ ಬಿದ್ದ ಎರಡು ಬೋಗಿಗಳಲ್ಲಿ ಒಂದರಲ್ಲಿ ಅವರಿದ್ದರು. ದಿವ್ಯಾ ಕುಮಾರಿ ಹಾಗೂ ತಂದೆ ಮೇಲಿನ ಬರ್ತ್ ನಲ್ಲಿ ಇದ್ದರೆ, ತಾಯಿ ಹಾಗೂ ಇಬ್ಬರು ಮಕ್ಕಳು ಕೆಳಗಿನಬರ್ತ್ ನಲ್ಲಿ ಇದ್ದರು.
‘‘ಅಪಘಾತ ಸಂಭವಿಸುವಾಗ ನಾವು ನಿದ್ರಿಸುತ್ತಿದ್ದೆವು. ಕಣ್ಣು ತೆರೆದು ನೋಡಿದಾಗ ಒಂದು ರೀತಿಯ ಪವಾಡ ಘಟಿಸಿದಂತೆ ನಾನು ಕವುಚಿ ಬಿದ್ದಿದ್ದೆ. ನನ್ನ ಬೆನ್ನಮೇಲೆ ಮಗು ಇತ್ತು’’ ಎಂದು ದಿವ್ಯಾ ಕುಮಾರಿಯ ತಂದೆ ಬಿಹಾರ್ ಶರೀಫ್ ನ ರಾಜೇಶ್ ತುರಿಯಾ ಹೇಳಿದ್ದಾರೆ.
ಕೆಲಸವೊಂದರ ಹಿನ್ನೆಲೆಯಲ್ಲಿ ರಾಜೇಶ್ ಹಾಗೂ ಕುಟುಂಬ ಚೆನ್ನೈಗೆ ಪ್ರಯಾಣಿಸುತ್ತಿತ್ತು. ಘಟನೆಯಲ್ಲಿ ರಾಜೇಶ್ ಅವರ ಪತ್ನಿ ಹಾಗೂ ಪುತ್ರಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಅಪಘಾತ ನಡೆದ ಸ್ಥಳದ ಸಮೀಪ ರೈಲ್ವೆ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ ಎಲ್ಲರೂ ಸುರಕ್ಷಿತರಾಗಿದ್ದಾರೆ.
‘‘ರೈಲು ಢಿಕ್ಕಿಯಾದಾಗ ಎಲ್ಲವೂ ಮುಗಿಯಿತು ಎಂದು ನಾನು ಭಾವಿಸಿದೆ. ಆದರೆ, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದೆ’’ ಎಂದು ಇನ್ನೋರ್ವ ಪ್ರಯಾಣಿಕ ಬಿಹಾರದ ನಂದು ರವಿ ದಾಸ್ ಅವರು ಹೇಳಿದ್ದಾರೆ.