ಗೋಮಾತೆ ಹೆಸರಿನಲ್ಲಿ ರಾಜಕೀಯ ಮಾಡುವವರು ದನ–ಕರುಗಳನ್ನು ಸಾಕುವವರ ಸಮಸ್ಯೆ ಅರಿಯಲಿ: ಶಾಸಕ ವಿನಯ್ ಕುಲಕರ್ಣಿ
''ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಲಿ''

ಬೆಳಗಾವಿ, ಜೂ.4: 'ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು. ಗೋಮಾತೆ ಹೆಸರಿನಲ್ಲಿ ರಾಜಕೀಯ ಮಾಡುವವರು, ಜಾತಿವಾದಿಗಳನ್ನು ಬಿಟ್ಟು, ದನ–ಕರುಗಳನ್ನು ಸಾಕುವವರು, ಹಾಲಿನ ಡೇರಿಗಳ ಮಾಲಕರು ಮತ್ತು ರೈತರ ವಿಚಾರಗಳನ್ನು ಅರಿಯಬೇಕು' ಎಂದು ಮಾಜಿ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ ಹೇಳಿದ್ದಾರೆ.
ರವಿವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾವೆಲ್ಲ ಡೇರಿ ಫಾರ್ಮರ್ಸ್. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಳು ಸಾಕಿದವ ನಾನು. ಆದರೆ, ಈಗ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನವರು ಆಕಳು ಬಳಸುತ್ತಿಲ್ಲ. ಅವುಗಳಿಗೆ ಸರಿಯಾಗಿ ಮೇವು ಸಿಗದ್ದರಿಂದ ಸಾಕುವುದೇ ಕಷ್ಟವಾಗಿದೆ. ಹೀಗಿರುವಾಗ ವಯಸ್ಸಾದ ಮತ್ತು ಬರಡು ಬಿದ್ದ ಆಕಳುಗಳನ್ನು ಏನು ಮಾಡೋದು?'' ಎಂದು ಪ್ರಶ್ನಿಸಿದರು.
''ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡುವ ಬಿಜೆಪಿಯ ಯಾವ ನಾಯಕರು ತಮ್ಮ ಮನೆಯಲ್ಲಿ ಹಸು ಸಾಕಿಲ್ಲ. ಈ ಬಗ್ಗೆ ಸುಮ್ಮನೆ ಮಾತನಾಡುತ್ತಾರಷ್ಟೇ. ಪ್ಲಾಸ್ಟಿಕ್ ಆಕಳನ್ನು ಕಟ್ಟಿ ಪೂಜಿಸುವ ಅವರು, ಮನೆಯಲ್ಲೊಂದು ಆಕಳು ಕಟ್ಟಿ ಮಾತನಾಡಲಿ'' ಎಂದು ಹೇಳಿದರು.
''ಸಚಿವ ಸ್ಥಾನದ ಅವಕಾಶ ಸಿಕ್ಕೇ ಸಿಗುತ್ತದೆ''
ಸಹಜವಾಗಿ ಮತ್ತೆ ಸಂಪುಟ ವಿಸ್ತರಣೆಯಾಗುತ್ತದೆ. ನಮ್ಮ ಸಮುದಾಯವಷ್ಟೇ ಅಲ್ಲ, ಬೇರೆ ಸಮುದಾಯಗಳಿಗೂ ಅವಕಾಶ ಸಿಗಬೇಕಿದೆ. ಹಿಂದೆ ಸಚಿವರಾಗಿದ್ದವರಿಗೆ ಮತ್ತೆ ಅವಕಾಶ ಕೊಡುವಂಥದ್ದೇನಿದೆ? ಯುವಕರಿಗೆ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತೇವೆ. ಭವಿಷ್ಯದಲ್ಲಿ ಹೊಸ ನಾಯಕರನ್ನು ಸೃಷ್ಟಿಸಬೇಕಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನನಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.