ಒಡಿಶಾ ರೈಲು ದುರಂತದ ತನಿಖೆ ಸಿಬಿಐಗೆ ಹಸ್ತಾಂತರಿಸಲು ರೈಲ್ವೆ ಮಂಡಳಿ ಶಿಫಾರಸು: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಭುವನೇಶ್ವರ: ಒಡಿಶಾದ ಬಾಲಸೋರ್ ನಲ್ಲಿ 275 ಮಂದಿಯನ್ನು ಬಲಿತೆಗೆದುಕೊಂಡ, ತ್ರಿವಳಿ ರೈಲು ದುರಂತದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರೈಲ್ವೆ ಮಂಡಳಿಯು ಶಿಫಾರಸು ಮಾಡಿದೆಯೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವಿವಾರ ತಿಳಿಸಿದ್ದಾರೆ.
‘‘ಅವಘಡದ ಸನ್ನಿವೇಶ, ಆಡಳಿತಕ್ಕೆ ದೊರೆತ ಮಾಹಿತಿ ಮಾಹಿತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಬಾಲಸೋರ್ ತ್ರಿವಳಿ ರೈಲು ದುರಂತದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ರೈಲ್ವೆ ಮಂಡಳಿಯು, ಶಿಫಾರಸು ಮಾಡಿದೆ ‘‘ ಎಂದವರು ಹೇಳಿದರು. ಈ ಭೀಕರ ರೈಲು ದುರಂತದ ಬಗ್ಗೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯವ ನೇತೃತ್ವದ ತಜ್ಞರ ಸಮಿತಿಯಿಂದ ತನಿಖೆ ನಡೆಸಬೇಕೆಂಬ ಮನವಿಯನ್ನು ಕೂಡಾ ಸಲ್ಲಿಸಲಾಗಿದೆಯೆಂದು ಅವರು ತಿಳಿಸಿದರು.
ರೈಲ್ವೆ ಸಚಿವರು ಈ ಮೊದಲು ತಾಂತ್ರಿಕ ದೋಷದಿಂದಾಗಿ, ಈ ರೈಲು ಅವಘಡ ಸಂಭವಿಸಿದೆ ಹಾಗೂ ಶೀಘ್ರದಲ್ಲೇ ಸಲ್ಲಿಕೆಯಾಗಲಿರುವ ವರದಿಯಲ್ಲಿ ಇವೆಲ್ಲವನ್ನೂ ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದರು. ರೈಲು ಹಳಿಯಲ್ಲಿನ ಇಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆ ಹಾಗೂ ಪಾಯಿಂಟ್ ಮೆಶಿನ್ ನಲ್ಲಿ ಬದಲಾವಣೆ ಮಾಡಿದ ಪರಿಣಾವಾಗಿ ಅವಘಡ ಉಂಟಾಗಿದೆ ಎಂದವರು ತಿಳಿಸಿದ್ದರು.
‘‘ತ್ರಿವಳಿ ರೈಲು ಅವಘಡದ ಕುರಿತಾಗಿ ನಡೆಸಲಾದ ಪ್ರಾಥಮಿಕ ತನಿಖೆಯಲ್ಲಿ ರೈಲ್ವೆ ಚಾಲಕನ ಯಾವುದೇ ತಪ್ಪು ಕಂಡುಬಂದಿಲ್ಲ ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿಯೂ ಯಾವುದೇ ದೋಷಗಳು ಇಲ್ಲವೆಂದು ತಿಳಿದುಬಂದಿದೆ. ಇದೊಂದು ವಿಧ್ವಂಸಕ ಕೃತ್ಯವಾಗಿರುವ ಸಾಧ್ಯತೆಯಿದೆಯೇ ಎಂಬ ದೃಷ್ಟಿಕೋನದಲ್ಲಿಯೂ ತನಿಖೆ ನಡೆಸಲಾಗುತ್ತಿದೆ’’ ಎಂದವರು ತಿಳಿಸಿದ್ದರು.
‘ಸಿಗ್ನಲಿಂಗ್ ವ್ಯವಸ್ಥೆಯಲ್ಲಾಗಿರುವ ಹಸ್ತಕ್ಷೇಪ’ ದ ಕಾರಣದಿಂದಾಗಿ ಕೊರಮಂಡಲ್ ಎಕ್ಸ್‍ಪ್ರೆಸ್ ಅವಘಡಕ್ಕೆ ತುತ್ತಾಗಿದೆಯೆಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.