ಹಿಂದಿನ ತಪ್ಪು ಮತ್ತೆ ಪುನರಾವರ್ತನೆ ಆಗಬಾರದು: ಸಚಿವ ಸ್ಥಾನ ಸಿಗದಿದ್ದಕ್ಕೆ ವಿನಯ್ ಕುಲಕರ್ಣಿ ಅಸಮಾಧಾನ

ಬೆಳಗಾವಿ, ಜೂ.4: ಕರ್ನಾಟಕದಲ್ಲಿ ವೀರೇಂದ್ರ ಪಾಟೀಲರ ನಂತರ ಇಷ್ಟೊಂದು ದೊಡ್ಡ ಬಹುಮತ ಕಾಂಗ್ರೆಸ್‍ಗೆ ಸಿಕ್ಕಿದೆ. ಹೀಗಾಗಿ, ಲಿಂಗಾಯತ ಸಮುದಾಯಕ್ಕೆ ಹಿಂದೆ ಮಾಡಿದ ಅನ್ಯಾಯ ಪುನರಾವರ್ತನೆಯಾಗಬಾರದು ಎಂದು ಮಾಜಿ ಸಚಿವ, ಹಾಲಿ ಶಾಸಕ ವಿನಯ ಕುಲಕರ್ಣಿ ವಿನಂತಿಸಿದ್ದಾರೆ.
ರವಿವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಚುನಾವಣೆಗಳಲ್ಲಿ ನಮ್ಮ ಸಮಾಜದವರು ಕಾಂಗ್ರೆಸ್‍ಗೆ ಕಡಿಮೆ ಪ್ರಮಾಣದಲ್ಲಿ ಮತ ನೀಡಿದ್ದರು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ನಮ್ಮ ಸಮುದಾಯಕ್ಕೆ ಒತ್ತು ನೀಡದಿದ್ದರೆ, ಕಾಂಗ್ರೆಸ್ ಪರಿಸ್ಥಿತಿ ಇಷ್ಟು ವರ್ಷ ಏನಾಗಿತ್ತು ಎಂಬುದನ್ನು ಪಕ್ಷದ ಮುಖಂಡರು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ಹೋರಾಟ ಮುನ್ನಡೆಸಿದವರಿಗೆ ಸಚಿವ ಸ್ಥಾನ ಸಿಗದಿರುವ ಕುರಿತು ಪ್ರತಿಕ್ರಿಯಿಸಿದ ಶಾಸಕ ವಿನಯ ಕುಲಕರ್ಣಿ ಅವರು, ‘ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‍ನಲ್ಲಿ ಪಂಚಮಸಾಲಿ ಸಮುದಾಯದ 13 ಜನರು ಗೆಲುವು ಕಂಡಿದ್ದಾರೆ. ಯಾರು ಸಮುದಾಯ ಕಟ್ಟುವ ಕೆಲಸವನ್ನು ಮಾಡಿದ್ದರೋ, ಅವರನ್ನು ಪಕ್ಷ ಗುರುತಿಸಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ಇದನ್ನು ಸಮುದಾಯ ಬಹಳ ಸೂಕ್ಷ್ಮತೆಯಿಂದ ಗಮನಿಸುತ್ತದೆ ಎಂದರು.
ಈ ವಿಚಾರ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಖಾತೆ ಹಂಚಿಕೆಯಲ್ಲೂ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಸಣ್ಣ ಮನೆಯವರು ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸಲು ಸಾಧ್ಯವೇ? ಹೀಗಾಗಿ ಅವರು ಬಳಸುವ ವಿದ್ಯುತ್ ಪ್ರಮಾಣ ಆಧರಿಸಿ, ಶೇ 10ರಷ್ಟು ಹೆಚ್ಚು(ಉಚಿತವಾಗಿ) ಬಳಕೆಗೆ ಅವಕಾಶ ಕೊಟ್ಟಿದ್ದೇವೆ. ಕೆಲ ಷರತ್ತು ವಿಧಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.