ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟಿರುವುದು ಶೋಕಿಗಲ್ಲ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟಿರುವುದು ಶೋಕಿಗಲ್ಲ, ಜನರು ಬೆಲೆ ಏರಿಕೆಯಿಂದ ತತ್ತರಿಸಿರುವುದರಿಂದ ಜನರಿಗೆ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೆಳಿದರು.
ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್ಟಿ, ಗ್ಯಾಸ್, ಬೆಲೆಯೇರಿಕೆ ಹೇಳಿಕೊಂಡೇ ನಾವು ಗೆದ್ದಿದ್ದೇವೆ. ಅದಕ್ಕೆ ಪರಿಹಾರಾರ್ಥವೇ ಈ ಗ್ಯಾರಂಟಿ ಕಾರ್ಡ್. ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವುದರಿಂದ ಗ್ಯಾರಂಟಿ ಯೋಜನೆ ಯಶಸ್ವಿ ಆಗುತ್ತದೆ ಎಂದರು.
ಸೊರಬ ಭಾಗದಲ್ಲಿ ಬಗರ್ ಹುಕುಂ ಬಹು ದೊಡ್ಡ ಸಮಸ್ಯೆ ಇದೆ.ಅರಣ್ಯ ಭೂಮಿಯಲ್ಲಿ ಸಾಗುವಳಿ, ಮನೆ ಕಟ್ಟಿಕೊಂಡವರ ರಕ್ಷಣೆ ಆಗಬೇಕಿದೆ.ಕೇಂದ್ರದ ಸಹಕಾರ ಪಡೆದು ಅದನ್ನು ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅದ್ಭುತ ಕೆಲಸ ಮಾಡಿದ್ದರು ಬೇರೆ ಸರ್ಕಾರ ಬಂದ ನಂತರ ಅದೆಲ್ಲ ಹಾಳಾಗಿತ್ತು. ಈಗ ಅಧಿಕಾರಿ ವರ್ಗದ ಜೊತೆ ಮಾತಾಡಿದ್ದೇವೆ. ಅರಣ್ಯ ಸಚಿವರಿಗೆ ವಿನಂತಿ ಮಾಡಿದ್ದೇವೆ. ಅರಣ್ಯ ಭೂಮಿ ಸಮಸ್ಯೆ ತ್ವರಿತವಾಗಿ ಇತ್ಯರ್ಥ ಮಾಡುತ್ತೇವೆ ಎಂದರು.
ಈ ಚುನಾವಣೆಯಲ್ಲಿ ಒಂದು ಕುಟುಂಬದ ರೀತಿಯಲ್ಲಿ ಮಾಡಲು ನಾನು ಹೇಳಿದ್ದೆ.ಅದರಂತೆ ಕ್ಷೇತ್ರದ ಜನರ ಆಶೀರ್ವಾದಿಂದ ಸಚಿವ ಸ್ಥಾನದ ಪ್ರಸಾದ ಸಿಕ್ಕಿದೆ. ಈ ಜಯ ಕ್ಷೇತ್ರದ ಬಂಗಾರದ ಮನುಷ್ಯರು ಆಗಿರುವ ಜನರಿಗೆ ಸಲ್ಲುತ್ತದೆ.ಈ ಜಯ ಕ್ಷೇತ್ರದ ಜನರಿಗೆ ಅರ್ಪಣೆ ಮಾಡುತ್ತೇನೆ ಎಂದರು
ಕ್ಷೇತ್ರದ ಜನರ ಸೇವೆ ಮಾಡುತ್ತೇನೆ.ಸೋತ ಮತ್ತು ಗೆದ್ದ ಎರಡು ಸಂದರ್ಭದಲ್ಲಿ ಕ್ಷೇತ್ರದ ಜನರ ಜೊತೆ ಇದ್ದೇನೆ.ಶಾಸಕ, ಸಚಿವ ಸ್ಥಾನ ಬಂದು ಹೋಗುವ ಅಧಿಕಾರ. ಜನರ ಪ್ರೀತಿ ವಿಶ್ವಾಸ ಸದಾ ನಮ್ಮ ಜೊತೆ ಇರುತ್ತದೆ ಎಂದರು.
ಸೊರಬ ಸಮಗ್ರ ಅಭಿವೃದ್ಧಿ ನನ್ನ ಕನಸು. ಏತ ನೀರಾವರಿ ಯೋಜನೆ ಪೂರ್ಣ ಗೊಳಿಸುವುದು ಸೊರಬದಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿ ಮಾಡಲಾಗುವುದು.ಐದು ವರ್ಷದಲ್ಲಿ ಸೊರಬ ಚಿತ್ರಣ ಬದಲು ಆಗಲು ವಿಶ್ವಾಸ ಇದೆ.ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಎಂದರು.
ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದೆ.ಅತಿಥಿ ದೈಹಿಕ ಶಿಕ್ಷಕರು,ಕಾಯಂ ಶಿಕ್ಷಕರು,ಶಾಲಾ ಕಟ್ಟಡದ ಕೊರತೆ ಇದೆ. ಎಲ್ಲ ವ್ಯವಸ್ಥೆ ಸರಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಕುಗ್ಗುವುದಿಲ್ಲ.ಮಕ್ಕಳ ಭವಿಷ್ಯ ಮುಖ್ಯವಾಗಿದೆ.ಈ ಹಿನ್ನಲೆಯಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.