ಸಹಜ ಸ್ಥಿತಿಗೆ ಮರಳುತ್ತಿರುವ ಮಣಿಪುರ

ಇಂಫಾಲ: ಮಣಿಪುರದ ಇಂಫಾಲದಲ್ಲಿ ಶಂಕಿತ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿದ ದಿನದ ಬಳಿಕ ರಾಜ್ಯದಲ್ಲಿ ಸಾಮಾನ್ಯ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ಮಣಿಪುರದಲ್ಲಿ ಕಳೆದ 24 ಗಂಟೆಗಳ ಕಾಲ ಯಾವುದೇ ಹಿಂಸಾಚಾರದ ಘಟನೆಗಳು ನಡೆದಿಲ್ಲ. ಸಂಪೂರ್ಣ ಶಾಂತಿಯುತವಾಗಿದೆ ಎಂದು ರಾಜ್ಯ ಸರಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಅವರು ಹೇಳಿದ್ದಾರೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನವಿಯಂತೆ ಹೆಚ್ಚುವರಿಯಾಗಿ 175ಕ್ಕೂ ಅಧಿಕ ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಒಪ್ಪಿಸಲಾಗಿದೆ. ಇದಲ್ಲದೆ, ಒಟ್ಟು 88 ಬಾಂಬ್ಗಳನ್ನು ಪತ್ತೆ ಮಾಡಲಾಗಿದೆ.
ಮಣಿಪುರ ಕಣಿವೆ ಹಾಗೂ ಬೆಟ್ಟಗಳ ನಡುವಿನ ಬಫರ್ ವಲಯಗಳಲ್ಲಿ ಸಿಆರ್ಪಿಎಫ್ ಹಾಗೂ ಸೇನೆ ಗಸ್ತು ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಮಿತ್ ಶಾ ಅವರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿ, ಸಾರ್ವಜನಿಕರು, ನಾಗರಿಕ ಸಮಾಜದ ಸಂಘಟನೆಯ ಪ್ರತಿನಿಧಿಗಳು ಹಾಗೂ ಸಮುದಾಯದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ಬಳಿಕ ಶಾಂತಿ ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ‘‘ಶಾಂತಿ ಮರು ಸ್ಥಾಪಿಸಲು ಆಡಳಿತದ ನೆರವಿನೊಂದಿಗೆ ಎಲ್ಲ ಕಾರ್ಯವನ್ನು ಮಾಡಲಾಗುತ್ತಿದೆೆ’’ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸ್ಥಳಗಳಲ್ಲಿ 12 ಗಂಟೆಗಳ ಕಾಲ ಕರ್ಫ್ಯೂ ಹಿಂಪಡೆಯಲಾಗಿದೆ. ಇಂಫಾಲ ಪಶ್ಚಿಮ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಒಂದು ದಿನದ ಹಿಂದೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ 15 ಮಂದಿ ಗಾಯಗೊಂಡಿದ್ದರು. ‘‘ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಬಾಂಬ್ಗಳೊಂದಿಗೆ ಶಂಕಿತ ಕುಕಿ ಉಗ್ರರು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದರು’’ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರದ ಜನಾಂಗೀಯ ಹಿಂಸಾಚಾರದ ಕುರಿತು ತನಿಖೆ ನಡೆಸಲು ಗುವಾಹತಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಅಜಯ್ ಲಾಂಬಾ ನೇತೃತ್ವದ ಮೂವರು ಸದಸ್ಯರ ತನಿಖಾ ಆಯೋಗವನ್ನು ಕೇಂದ್ರ ಸರಕಾರ ರವಿವಾರ ನಿಯೋಜಿಸಿದೆ .
‘‘ಆಯೋಗ ಆದಷ್ಟು ಬೇಗ, ಅಂದರೆ, ಮೊದಲ ಬೈಠಕ್ನ ದಿನಾಂಕದಿಂದ 6 ತಿಂಗಳ ಒಳಗೆ ತನ್ನ ವರದಿ ಸಲ್ಲಿಸಬೇಕು’’ ಎಂದು ಕೇಂದ್ರ ಗೃಹ ಸಚಿವಾಲಯ ರವಿವಾರ ಜಾರಿಗೊಳಿಸಿದ ಅಧಿಸೂಚನೆ ತಿಳಿಸಿದೆ.