ಇಸ್ರೇಲ್: ಸರಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ

ಟೆಲ್ಅವೀವ್: ಇಸ್ರೇಲ್ ನ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವ ವಿವಾದಾತ್ಮಕ ಯೋಜನೆಯ ವಿರುದ್ಧ ರಾಜಧಾನಿ ಟೆಲ್ಅವೀವ್ ನಲ್ಲಿ ಶನಿವಾರ ನಡೆದ ಸತತ 22ನೆಯ ವಾರದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಶನಿವಾರ ಇಸ್ರೇಲ್ ನ ಸಿಸಾರಿಯಾ ನಗರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದೆದುರು ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗಿದೆ ಎಂದು ಹೇಳಿರುವ ಪೊಲೀಸರು 17 ಮಂದಿಯನ್ನು ಬಂಧಿಸಿದ್ದಾರೆ. ಆದರೆ ಪೊಲೀಸರ ಲಾಠಿಗೂ ಅಂಜದೆ ಪ್ರತಿಭಟನೆ ಮುಂದುವರಿಯಲಿದೆ. ಸರಕಾರ ಈ ವಿವಾದಾತ್ಮಕ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿದಿದೆ. ಆದರೆ ಇಷ್ಟು ಸಾಲದು, ಯೋಜನೆಯನ್ನು ಹಿಂದಕ್ಕೆ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಇಸ್ರೇಲ್ ಸರ್ವಾಧಿಕಾರಿ ಆಡಳಿತದತ್ತ ಬದಲಾಗುವುದನ್ನು ನಾವು ತಡೆಯಬೇಕಿದೆ. ಈಗ ಅಧಿಕಾರದಲ್ಲಿರುವ ಭ್ರಷ್ಟ ಸರಕಾರದಲ್ಲಿ ಹಲವು ಕ್ರಿಮಿನಲ್ ಗಳಿದ್ದು ಇವರು ನಮ್ಮ ದೇಶದ ಘನತೆಯನ್ನು ತೃತೀಯ ಜಗತ್ತಿನ ದೇಶಗಳ ಮಟ್ಟಕ್ಕೆ ಇಳಿಸಲಿದ್ದಾರೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಇಸ್ರೇಲ್ ನಲ್ಲಿ ಕಟ್ಟಾ ಬಲಪಂಥೀಯ ಪಕ್ಷದ ಬೆಂಬಲದಿಂದ ಮೈತ್ರಿ ಸರಕಾರವನ್ನು ಮುನ್ನಡೆಸುತ್ತಿರುವ ನೆತನ್ಯಾಹು, ನ್ಯಾಯಾಂಗ ಮತ್ತು ಸಂಸದರ ನಡುವೆ ಅಧಿಕಾರದ ಸಮತೋಲನಕ್ಕೆ ಪ್ರಸ್ತಾವಿತ ನ್ಯಾಯಾಂಗ ಸುಧಾರಣೆ ಅತ್ಯಗತ್ಯ ಎನ್ನುತ್ತಿದ್ದಾರೆ.