ನನ್ನ ಪಕ್ಷದ ನಾಶಕ್ಕೆ ಸೇನೆಯ ಪ್ರಯತ್ನ: ಇಮ್ರಾನ್ ಖಾನ್ ಆರೋಪ

ಇಸ್ಲಮಾಬಾದ್: ಪಾಕಿಸ್ತಾನದ ಸೇನೆ ಮತ್ತದರ ಗುಪ್ತಚರ ದಳ ಐಎಸ್ಐ ಬಹಿರಂಗವಾಗಿ ತನ್ನ ಪಕ್ಷವನ್ನು ನಾಶಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ಆರೋಪಿಸಿದ್ದಾರೆ.
‘ನನ್ನ ವಿರುದ್ಧ ದಾಖಲಿಸಿರುವ ಸುಮಾರು 150 ಕ್ರಿಮಿನಲ್ ಕೇಸುಗಳು ಕ್ಷುಲ್ಲಕವಾಗಿದ್ದು ಯಾವುದೇ ಸಿವಿಲಿಯನ್ ನ್ಯಾಯಾಲಯದಲ್ಲಿ ಇವನ್ನು ತಳ್ಳಿಹಾಕಲಾಗುತ್ತದೆ. ಆದರೆ ತಮ್ಮ ದಾರಿಯಿಂದ ನನ್ನನ್ನು ಬದಿಗೆ ಸರಿಸಲು ಕಟಿಬದ್ಧವಾಗಿರುವ ಅವರು (ಸರಕಾರ) ಮಿಲಿಟರಿ ನ್ಯಾಯಾಲಯದಲ್ಲಿ ತನ್ನನ್ನು ವಿಚಾರಣೆಗೆ ಒಳಪಡಿಸಿ ಜೈಲಿಗೆ ಅಟ್ಟುವುದರಲ್ಲಿ ಸಂಶಯವೇ ಇಲ್ಲ. ಮಿಲಿಟರಿ ನ್ಯಾಯಾಲಯ ಈಗ ಅವರ ಎದುರಿಗಿರುವ ಏಕೈಕ ಭರವಸೆಯಾಗಿದೆ ಮತ್ತು ನನ್ನನ್ನು ಉದ್ದೇಶಿಸಿಯೇ ಅದನ್ನು ಸ್ಥಾಪಿಸಲಾಗಿದೆ’ ಎಂದು ಲಾಹೋರ್ನ ತಮ್ಮ ನಿವಾಸದಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಇಮ್ರಾನ್ ಖಾನ್ ಹೇಳಿದ್ದಾರೆ.
ತನ್ನ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷವನ್ನು ಹೊಸಕಿಹಾಕಲು ಪ್ರಯತ್ನ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಪಕ್ಷದ ಹಲವು ಮುಖಂಡರನ್ನು ಬಂಧಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿದೆ. ಇದರಿಂದಾಗಿ ಹಲವರು ಪಕ್ಷಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದಲೇ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ.
ಹಲವು ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ ಪಕ್ಷದ ವಿರುದ್ಧವೇ ಎತ್ತಿಕಟ್ಟುವ ಕಾರ್ಯ ನಡೆಯುತ್ತಿದ್ದು ಇದರ ಹಿಂದೆ ಮಿಲಿಟರಿಯ ಕೈವಾಡವಿರುವುದು ಸ್ಪಷ್ಟವಾಗಿದೆ. ಯಾಕೆಂದರೆ ಈಗ ಅವರು ಬಹಿರಂಗವಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಇಮ್ರಾನ್ ಆರೋಪಿಸಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.