ರಶ್ಯದ ಶ್ರೀಮಂತರಿಗೆ ಬಾಂಬ್ ಶೆಲ್ಟರ್ ನಿರ್ಮಾಣ

ಮಾಸ್ಕೊ: ಶ್ರೀಮಂತರು ಹಾಗೂ ಉನ್ನತ ಅಧಿಕಾರಿಗಳು ಚಿಕಿತ್ಸೆ ಪಡೆಯುವ ದೇಶದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಹೊಸ ಬಾಂಬ್ ಶೆಲ್ಟರ್ ನಿರ್ಮಿಸುವಂತೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶಿಸಿರುವುದಾಗಿ ಸರಕಾರದ ವೆಬ್‌ಸೈಟ್ ವರದಿ ಮಾಡಿದೆ.
431 ಸಾವಿರ ಡಾಲರ್ ವೆಚ್ಚದ ಈ ಯೋಜನೆಯಡಿ ಬಾಂಬ್ ಶೆಲ್ಟರ್(ಬಾಂಬ್ ದಾಳಿಯಿಂದ ರಕ್ಷಣೆ ಒದಗಿಸುವ ವ್ಯವಸ್ಥೆ) ಅನ್ನು ಮಾಸ್ಕೋದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಯಲ್ಲಿ ಈ ವರ್ಷದ ಡಿಸೆಂಬರ್ ಒಳಗೆ ನಿರ್ಮಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇದರಲ್ಲಿ ವೈದ್ಯಕೀಯ ಸಿಬಂದಿ ಸೇರಿದಂತೆ 800 ಜನರಿಗೆ ಸ್ಥಳಾವಕಾಶವಿರುತ್ತದೆ. ವಿಕಿರಣದಿಂದಲೂ ರಕ್ಷಣೆ ಒದಗಿಸಬಲ್ಲ ಈ ವ್ಯವಸ್ಥೆಗೆ ಹಲವು ದ್ವಾರಗಳಿವೆ, ಜತೆಗೆ ಒಂದು ತುರ್ತುನಿರ್ಗಮನ ದಾರಿಯಿದೆ.
ಸಾಮೂಹಿಕ ವಿನಾಶದ ಅನಿಲ ಆಯುಧ ಹಾಗೂ ವಾಯುದ್ರವ(ಗಾಳಿಯಲ್ಲಿರುವ ದ್ರವ ಕಣಗಳು)ಗಳಿಂದ ಗಾಳಿಯನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು ಸಂಕೀರ್ಣ ವಾತಾಯನ ವ್ಯವಸ್ಥೆಯನ್ನೂ ಹೊಂದಿದೆ. ಯುದ್ಧದ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ವೈದ್ಯಕೀಯ ಸಿಬಂದಿಗೆ ತರಬೇತಿ ನೀಡಲಾಗುವುದು ಎಂದು ವರದಿ ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಉಕ್ರೇನ್ ನಿಂದ ಪ್ರತಿದಾಳಿ ಹೆಚ್ಚಿರುವುದು ಮತ್ತು ರಾಜಧಾನಿ ಮಾಸ್ಕೋದ ಮೇಲೆ ಡ್ರೋನ್ ದಾಳಿ ನಡೆಸುವ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಬಾಂಬ್ ಶೆಲ್ಟರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.