ಬೆಸ್ಕಾಂ ಸಹಾಯಕನ ಹುದ್ದೆಗೆ ನಕಲಿ ನೇಮಕಾತಿ ಪತ್ರ; ಎಫ್‍ಐಆರ್ ದಾಖಲು

ಬೆಂಗಳೂರು, ಜೂ 4: ಬೆಸ್ಕಾಂನಲ್ಲಿ ಕಿರಿಯ ಸಹಾಯಕನ ಹುದ್ದೆಗೆ ನೇಮಕವಾಗಿರುವಂತೆ ನಕಲಿ ನೇಮಕಾತಿ ಪತ್ರ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವೈಭವ್ ವೆಂಕಟೇಶ್, ಶಿವಪ್ರಸಾದ್, ವಿಜಯ್ ಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ್ ಎಂಬುವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಮೇ 22ರ ಮಧ್ಯಾಹ್ನ ಕ್ರೆಸೆಂಟ್ ರಸ್ತೆಯ ಬೆಸ್ಕಾಂ ಕಚೇರಿಗೆ ಬಂದಿದ್ದ ವೈಭವ್ ವೆಂಕಟೇಶ್, ಬೆಸ್ಕಾಂ ಕಿರಿಯ ಸಹಾಯಕ ಹುದ್ದೆಗೆ ನೇಮಕವಾಗಿರುವ ಪತ್ರ ಸಲ್ಲಿಸಿದ್ದಾನೆ. ಪತ್ರವನ್ನು ಕಂಡ ಕಾರ್ಯನಿರ್ವಾಹಕ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್ ಹೆಸರಿನ ನಕಲಿ ಸೀಲ್ ಮತ್ತು ನಕಲಿ ಸಹಿ ಇರುವುದನ್ನು ಗಮನಿಸಿದ್ದಾರೆ. ಅಧೀಕ್ಷಕ ಇಂಜಿನಿಯರ್ ಮೂಲಕವೇ ಪರಿಶೀಲಿಸಿದಾಗ ಪತ್ರ ನಕಲಿ ಎಂಬುದು ಬೆಳಕಿಗೆ ಬಂದಿತ್ತು. ವೈಭವ್ ವೆಂಕಟೇಶ್ ಬಳಿ ಪತ್ರದ ಬಗ್ಗೆ ವಿಚಾರಿಸಿದಾಗ, ಆರೋಪಿಗಳಾದ ಶಿವಪ್ರಸಾದ್, ವಿಜಯ್ ಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ್ 20ಲಕ್ಷ ರೂ. ಪಡೆದು ನಕಲಿ ನೇಮಕಾತಿ ಪತ್ರ ನೀಡಿರುವುದು ಬಯಲಾಗಿದೆ.
ಈ ಹಿನ್ನೆಲೆ ನಕಲಿ ನೇಮಕಾತಿ ಪತ್ರ ತಂದಿದ್ದ ವೈಭವ್ ವೆಂಕಟೇಶ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಶಿವಪ್ರಸಾದ್, ವಿಜಯ್ ಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ್ ವಿರುದ್ಧ ಬೆಸ್ಕಾಂ ಅಧಿಕಾರಿಗಳು ಹೈಗ್ರೌಂಡ್ಸ್ ಠಾಣೆಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.