ಗಾಂಧಿಯ ಆದರ್ಶ ಜಗತ್ತಿಗೆ ಪ್ರಜಾಪ್ರಭುತ್ವ ಸಂರಕ್ಷಿಸುವ ಶಕ್ತಿ: ಇಳಾ ಗಾಂಧಿ
ಬೆಂಗಳೂರು, ಜೂ. 4: ‘ಇಂದಿನ ಮಾಧ್ಯಮಗಳ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಆದರ್ಶ ಜಗತ್ತಿಗೆ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಶಕ್ತಿಯಾಗಿ ಮಾದರಿಯಾಗಿದೆ’ ಎಂದು ಗಾಂಧೀಜಿ ಮೊಮ್ಮಗಳು ಇಳಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಡರ್ಬಾನ್ ನಗರದ ಹೊರವಲಯದಲ್ಲಿನ ಫೀನಿಕ್ಸ್ ಪ್ರದೇಶದ ಬೆಟ್ಟದ ತುದಿಯಲ್ಲಿರುವ ‘ಇಂಡಿಯನ್ ಒಪಿನಿಯನ್’ ಪತ್ರಿಕೆಯ ಪ್ರಾರಂಭವಾದ ಕಟ್ಟಡದ ಆವರಣದಲ್ಲಿ ನಡೆದ ಪತ್ರಿಕೆಯ 120ನೆ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂಡಿಯನ್ ಒಪಿನಿಯನ್ ಪತ್ರಿಕೆಯನ್ನು ಪ್ರಾರಂಭಿಸಿದ ಅಗತ್ಯವನ್ನು ಕುರಿತು ಚಾರಿತ್ರಿಕ ನೆನಪುಗಳನ್ನು ಹಂಚಿಕೊಂಡರು.
ಸಾಮಾಜಿಕ ನ್ಯಾಯ, ಸಮಾನತೆ, ಸತ್ಯ ಪ್ರತಿಪಾದನೆಯೆ ಪತ್ರಕರ್ತ ಗಾಂಧಿಯ ಗುರಿಯಾಗಿತ್ತು. ಚಳವಳಿಯ ನೇತಾರ ಗಾಂಧೀಜಿಗೂ, ಪತ್ರಕರ್ತ ಗಾಂಧಿಗೂ ವ್ಯತ್ಯಾಸವಿರಲಿಲ್ಲ. ಏಕೆಂದರೆ ಹೋರಾಟವೇ ಸತ್ಯಾಗ್ರಹವೇ ಅವರ ಮುಖ್ಯ ಆಶಯವಾಗಿತ್ತು ಎಂದು ಅವರು ಸ್ಮರಿಸಿದರು.
ದಕ್ಷಿಣ ಆಫ್ರಿಕಾದ ಲಂಗಾದುಭೆ ಮಾತನಾಡಿ, ‘ತಮ್ಮ ತಾತನಿಗೂ, ಗಾಂಧೀಜಿಯವರಿಗೂ ಇದ್ದ ಸ್ನೇಹದ ನೆನಪುಗಳನ್ನು ಹಂಚಿಕೊಂಡರು. ದಕ್ಷಿಣ ಆಫ್ರಿಕಾದ ಅಂದಿನ ರಾಜಕಾರಣದ ಬಗ್ಗೆ ಇಬ್ಬರಿಗೂ ಸಮಾನವಾದ ಭಾವನೆಗಳಿದ್ದವು. ಯಾವುದೇ ಬಿಳಿಯ ಜನ ನನ್ನ ಈ ನೆಲದ ನಿವಾಸಿಗಳ ಬಗ್ಗೆ ಅವರ ಮೂಲಭೂತ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದಿದ್ದಾಗ ಗಾಂಧೀಜಿಯವರು ನನ್ನ ಜನರ ಮನೆ ಬಾಗಿಲಿಗೆ ಬಂದು ಅವರ ಸಂಕಷ್ಟಗಳಿಗೆ ಸ್ಪಂದಿಸಿದರು. ಅವರ ಕರುಣೆ ಅಪಾರ, ಅವರ ಕಳಕಳಿ, ಪ್ರಾಮಾಣಿಕತೆ, ಕಾರ್ಯಚತುರತೆ ಯಾವಾಗಲೂ ನಿರ್ಭಯತೆಯಿಂದ ಕೂಡಿದ್ದು, ನನ್ನ ಕುಟುಂಬದ ಜೊತೆಗಿನ ಅವರ ಸ್ನೇಹ ಅಮೂಲ್ಯವಾದದ್ದು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ತಮಿಳುನಾಡಿನ ಅಣ್ಣಾಮಲೈ, ಕರ್ನಾಟಕದಿಂದ ನರೇಂದ್ರ, ಸುಜಾತ, ವಿಶುಕುಮಾರ್, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಅಲ್ಲದೆ ಉತ್ತರ ಭಾರತದಿಂದ ಮಹಾತ್ಮ ಗಾಂಧಿ ಅನುಯಾಯಿಗಳು ಭಾಗವಹಿಸಿದ್ದರು.