ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹೀಂ ಹೆಸರಲ್ಲಿ ಕೊಲೆ ಬೆದರಿಕೆ: ವಾಂಖಡೆ

ಹೊಸದಿಲ್ಲಿ: ತಾನು ಹಾಗೂ ತನ್ನ ಕುಟುಂಬ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹೀಂ ಹೆಸರಿನಲ್ಲಿ ಕೊಲೆ ಬೆದರಿಕೆ ಕರೆ ಸ್ವೀಕರಿಸಿದ್ದೇವೆ ಎಂದು ಮಾದಕ ದ್ರವ್ಯ ನಿಯಂತ್ರಣ ಬ್ಯುರೊ (NCB) ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖಡೆ ಅವರು ಹೇಳಿದ್ದಾರೆ.
ಈ ಹಿಂದೆ ವಾಂಖಡೆ ಅವರು ಸಾಮಾಜಿಕ ಮಾಧ್ಯಮದ ನಕಲಿ ಖಾತೆಯಿಂದ ಕೊಲೆ ಬೆದರಿಕೆ ಕರೆಗಳನ್ನು ಸ್ವೀಕರಿಸಿರುವುದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ದಾವೂದ್ ಇಬ್ರಾಹೀಂ ಹೆಸರಲ್ಲಿ ತಾನು ಕೊಲೆ ಬೆದರಿಕೆ ಕರೆಗಳನ್ನು ಸ್ವೀಕರಿಸಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದರು.
‘‘ತನ್ನ ಮೇಲೆ ಅಥವಾ ತನ್ನ ಕುಟುಂಬದ ಮೇಲೆ ದಾಳಿ ನಡೆದರೆ, ಯಾರು ಜವಾಬ್ದಾರಿ’’ ಎಂದು ವಾಂಖಡೆ ಅವರು ಪೊಲೀಸರಲ್ಲಿ ಪ್ರಶ್ನಿಸಿದ್ದಾರೆ. ಈ ನಡುವೆ, ಈ ವಿಷಯದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಕರ ಹಡಗಿನಲ್ಲಿ ಮಾದಕದ್ರವ್ಯ ಪತ್ತೆ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಸಿಲುಕಿಸದೇ ಇರಲು ೨೫ ಕೋಟಿ ರೂಪಾಯಿ ಲಂಚದ ಬೇಡಿಕೆ ಇರಿಸಿದ ಆರೋಪದಲ್ಲಿ ಸಿಬಿಐ ವಾಂಖಡೆ ವಿರುದ್ಧ ಪ್ರಕರಣ ದಾಖಲಿಸಿದೆ.